ಪಂಜಾಬ್ ರಾಜ್ಯದ ಲೂಧಿಯಾನದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಕಾರು ಹರಿಸಿದ್ದರಿಂದ ಓರ್ವ ರೈತ ಗಾಯಗೊಂಡಿದ್ದಾನೆ ಎಂದು ಭಾರತ್ ಕಿಸಾನ್ ಯುನಿಯನ್ ಆರೋಪಿಸಿದೆ. ಆದರೆ ಈ ಆರೋಪವನ್ನು ತಳ್ಳಿಹಾಕಿರುವ ಶಿರೋಮಣಿ ಅಕಾಲಿದಳ ರೈತರು ಎಸ್.ಯುವಿ ಕಾರನ್ನು ಧ್ವಂಸ ಮಾಡಿದ್ದಾರೆ ಎಂದು ಆಪಾದಿಸಿದೆ.
ಕೇಂದ್ರದ ಮಾಜಿ ಸಚಿವೆ ಹರ್ ಸಿಮ್ರತ್ ಕೌರ್ ಬಾದಲ್ ಚುನಾವಣಾ ಪ್ರಚಾರಕ್ಕಾಗಿ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಆಗ ಶಿರೋಮಣಿ ಅಕಾಲಿದಳಕ್ಕೆ ಸೇರಿದ ಕಾರಿನ ಬಾನೆಟ್ ಮೇಲೆ ಇಬ್ಬರು ರೈತರು ಕುಳಿತಿರುವ ವಿಡಿಯೋ ವೈರಲ್ ಆಗಿದೆ.
ವಿಡಿಯೋದಲ್ಲಿ ಅಕಾಲಿದಳ ಬೆಂಗಾವಲು ಪಡೆಯ ಎಸ್.ಯುವಿ ವಾಹನ ರೈತರ ಮೇಲೆ ಹರಿದಿದೆ ಎಂದು ಆರೋಪಿಸಲಾಗಿದೆ. ಆದರೆ ಇಬ್ಬರು ಪ್ತತಿಭಟನಾನಿರತ ರೈತರು ಕಾರಿನ ಬಾನೆಟ್ ಮೇಲೆ ಕುಳಿತಿದ್ದು, ವಾಹನವು ವೇಗವಾಗಿ ಚಲಿಸುತ್ತಿದ್ದಂತೆಯೇ ಓರ್ವ ರೈತ ಬಾನೆಟ್ ಮೇಲಿನಿಂದ ಕೆಳಗೆ ಬೀಳುವ ದೃಶ್ಯವುಳ್ಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ರೈತರನ್ನು ಕಾರಿನ ಬಾಗಿಲನ್ನು ಮುರಿದು ಹಾಕಿದ್ದಾರೆ. ಕಿಟಕಿ ಗಾಜುಗಳನ್ನು ಒಡೆದು ಹಾಕಲಾಗಿದೆ ಎಂದು ಶಿರೋಮಣಿ ಅಕಾಲಿದಳ ಆರೋಪಿಸಿದೆ.
ಭಾರತ್ ಕಿಸಾನ್ ಯೂನಿಯನ್ ಅಧ್ಯಕ್ಷ ಬೂಟಾಸಿಂಗ್ ಬರ್ಜ್ ಗಿಲ್ “ಇದು ಇನ್ನೊಂದು ಲಖಿಂಪುರ್ ಖೇರಿ ಘಟನೆ. ಅಕಾಲಿದಳ ಗೂಂಡಾಗಳು ರೈತರ ಮೇಲೆ ವಾಹನ ಹರಿಸಿದ್ದಾರೆ. ಆದರೆ ರೈತರು ಅಪಾಯದಿಂದ ಪಾರಾಗಿದ್ದಾರೆ. ನಮ್ಮ ಕಾರ್ಯಕರ್ತರು ಗಾಯಗೊಂಡಿದ್ದಾರೆ” ಎಂದು ಹೇಳಿದ್ದಾರೆ.
ಪ್ರತಿಭಟನಾನಿರತ ರೈತರನ್ನು ಬೆದರಿಸಲು ಶಿರೋಮಣಿ ಅಕಾಲಿದಳದ ಬೆಂಗಾವಲು ಪಡೆದ ಗಾಳಿಯಲ್ಲಿ ಹಲವು ಸುತ್ತು ಗುಂಡು ಹಾರಿಸಿದೆ ಎಂದು ದೂರಲಾಗಿದೆ.


