ರೈತರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿ ಸಂಸದ ರಾಮ್ ಚಂದರ್ ಜಂಗ್ರಾ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಹರ್ಯಾಣದ ಹಿಸಾರ್ ಜಿಲ್ಲೆಯ ನಾರ್ನಾಂಡ್ ಪೊಲೀಸ್ ಠಾಣೆಯ ಹೊರಗೆ ನೂರಾರು ರೈತರು ಪ್ರತಿಭಟನೆ ನಡೆಸಿದ್ದಾರೆ.
ಸ್ಥಳೀಯ ರೈತ ಮುಖಂಡ ಮಾಧ್ಯಮಗಳೊಂದಿಗೆ ಮಾತನಾಡಿ, ಬಿಜೆಪಿ ಸಂಸದ ಮತ್ತು ಅವರ ಸಹಚರರು ರೈತ ಕುಲದೀಪ್ ರಾಣಾ ಮೇಲೆ ಹಲ್ಲೆ ನಡೆಸಿದ್ದು ಆತನಿಗೆ ತೀವ್ರ ಗಾಯಗಳಾಗಿವೆ. ಆದ್ದರಿಂದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಠಾಣೆಯ ಹೊರಗೆ ಪ್ರತಿಭಟನೆ ನಡೆಸಿದ ರೈತರು ಬಿಜೆಪಿ ಸಂಸದ ಮತ್ತು ಅವರ ಸಹಚರರ ವಿರುದ್ಧ ಎಫ್ಐಆರ್ ದಾಖಲಿಸ ಬೇಕು ಮತ್ತು ಅವರನ್ನು ಬಂಧಿಸುವಂತೆ ಪೊಲೀಸರಿಗೆ ಒತ್ತಾಯಿಸಿದರು.
ನಮ್ಮ ಬೇಡಿಕೆಗಳು ಬಹಳ ಸ್ಪಷ್ಟವಾಗಿವೆ. ಕುಲದೀಪ್ ರಾಣಾ ಮೇಲೆ ಹಲ್ಲೆ ನಡೆಸಿದ ಬಿಜೆಪಿ ಸಂಸದ ರಾಮ್ ಚಂದರ್ ಜಂಗ್ರಾ ಮತ್ತು ಆತನ ಸಹಚರರ ವಿರುದ್ಧ ಪ್ರಕರಣ ದಾಖಲಿಸಬೇಕು. ಅವರನ್ನು ಬಂಧಿಸಬೇಕು. ಮೂವರು ರೈತರ ವಿರುದ್ಧ ಹಾಕಿರುವ ಸುಳ್ಳು ಪ್ರಕರಣಗಳನ್ನು ಹಂಪಡೆಯಬೇಕು ಎಂದು ರವಿ ಅಜಾದ್ ಆಗ್ರಹಿಸಿದರು.
ಕುಲದೀಪ್ ರಾಣಾ ಅವರಿಗೆ ನಾಲ್ಕು ಗಂಟೆಗಳ ಕಾಲ ಆಪರೇಷನ್ ಮಾಡಲಾಗಿದೆ. ಅಪರೇಷನ್ ಯಶಸ್ವಿಯಾಗಿದೆ. ಆದರೂ ಹಿಸಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಸಂಯುಕ್ತ ಕಿಸಾನ್ ಮೋರ್ಚಾದ ನೂರಾರು ಕಾರ್ಯಕರ್ತರು ನಾರ್ನಾಂಡ್ ಪೊಲೀಸ್ ಠಾಣೆಯ ಹೊರಗೆ ಪ್ರತಿಭಟನೆ ನಡೆಸುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ರೈತರು ಜಮಾಯಿಸಿದ್ದು ಬಿಜೆಪಿ ಸಂಸದ ರಾಮ್ ಚಂದರ್ ಮತ್ತು ಆತನ ಸಹಚರರ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ.