ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಕಡಿಮೆಯಾಗಿದೆ. ಇದರಿಂದ ಬಂಡವಾಳ ಹೂಡಿಕೆದಾರರು ರಾಜ್ಯಕ್ಕೆ ಬರುವುದಿಲ್ಲ. ಉದ್ಯೋಗಕ್ಕೆ ಕುತ್ತು ಬರಲಿದೆ ಹಾಗಾಗಿ ಸರ್ಕಾರ ಇಂತಹ ಪರಿಸ್ಥಿತಿ ಉದ್ಭವಿಸದಂತೆ ನೋಡಿಕೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾಜ್ಯ ಸರ್ಕಾರಕ್ಕೆ ಸಲಹೆ ಮಾಡಿದ್ದಾರೆ.
ರಾಜ್ಯಕ್ಕೆ ಒಂದು ದಿನಕ್ಕೆ ಮಾತ್ರ ಸಾಕಾಗುವಷ್ಟ ಕಲ್ಲಿದ್ದಲು ಮಾತ್ರ ಪೂರೈಕೆಯಾಗುತ್ತಿದೆ. ರಾಜ್ಯದಲ್ಲಿ ಸಾಮರ್ಥ್ಯಕ್ಕೆ ಅನುಗುಣವಾಗಿ ವಿದ್ಯುತ್ ಉತ್ಪಾದನೆ ಆಗುತ್ತಿಲ್ಲ. ಸದ್ಯಕ್ಕೆ ಹೆಚ್ಚು ಮಳೆ ಇರುವುದರಿಂದ ಪರಿಸರ ಕೈ ಹಿಡಿದಿದೆ ಎಂದು ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.
ಕಲ್ಲಿದ್ದಲು ಕೊರತೆ ಇದ್ದು ವಿದ್ಯುತ್ ಪೂರೈಕೆಗೆ ಸರ್ಕಾರದ ಕಾರ್ಯಸೂಚಿ ಏನು ಎಂದು ತಿಳಿಸಬೇಕು. ಕಲ್ಲಿದ್ದಲು ಸಚಿವರು ನಮ್ಮವರೇ ಇದ್ದಾರೆ. ಹಿಂದಿನ ಸರ್ಕಾರ ಕಲ್ಲಿದ್ದಲು ಬಳಸಿಕೊಳ್ಳಲು ಅನುಮತಿ ನೀಡಿರಲಿಲ್ಲ. ಬದಲಿಗೆ ನಮಗೆ ಬೆದರಿಕೆ ಹಾಕಿದ್ದರು. ಈ ಬಗ್ಗೆ ಬೇರೆ ಸಮಯದಲ್ಲಿ ಮಾತನಾಡುತ್ತೇನೆ. ಈಗ ಅವರದೇ ಸರ್ಕಾರ ಇದೆ ಎಂದು ಅನುಮತಿ ನೀಡಿದ್ದಾರೆ ಎಂದು ತಿಳಿಸಿದರು.
ಪ್ರಹ್ಲಾದ್ ಜೋಷಿ ಅವರು ರಾಜ್ಯಕ್ಕೆ ಪ್ರತಿನಿತ್ಯ 24 ಮೆಟ್ರಿಕೆ ಟನ್ ಕಲ್ಲಿದ್ದಲು ಪೂರೈಕೆಯಾಗುತ್ತಿದೆ ಎಂದು ಹೇಳಿದ್ದಾರೆ. ಅದು ಇನ್ನೂ ರಸ್ತೆಯಲ್ಲೇ ಬರುತ್ತಿದೆ. ಬಳ್ಳಾರಿ, ರಾಯಚೂರಿಗೆ ಹೋಗಿ ಅಲ್ಲಿಲ್ಲ ಎಷ್ಟು ಯೂನಿಟ್ ವಿದ್ಯುತ್ ಸಾಮರ್ಥ್ಯ ಇದೆ. ಎಷ್ಟು ಉತ್ಪಾದನೆ ಆಗುತ್ತಿದೆ. ಎಷ್ಟು ಘಟಕಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ನೋಡಿ ಎಂದು ಗೇಲಿ ಮಾಡಿದರು.
ಉಪಚುನಾವಣೆ ಫಲಿತಾಂಶ ಇಂಧನ ದರ ಇಳಿಕೆಗೆ ಸಾಕ್ಷಿ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರ ತೀರ್ಪಿಗೆ ಎಷ್ಟು ಬೆಲೆ ಇದೆ. ಸರ್ಕಾರಗಳು ಹೇಗೆ ಹೆದರುತ್ತವೆ ಎಂಬುದಕ್ಕೆ ಉಪಚುನಾವಣೆಯ ಫಲಿತಾಂಶದ ನಂತರ ಇಂಧನ ದರ ಇಳಿಕೆಯೇ ಸಾಕ್ಷಿಯಾಗಿದೆ ಎಂದರು.
ಅಡುಗೆ ಅನಿಲ ಸೇರಿ ಎಲ್ಲಾ ವಸ್ತುಗಳ ಬೆಲೆ ಇಳಿಕೆ ಆಗುವವರೆಗೂ ಕಾಂಗ್ರೆಸ್ ನವೆಂಬರ್ 14 ರಿಂದ ದೇಶದೆಲ್ಲೆಡೆ ಜನರಲ್ಲಿ ಜಾಗೃತಿ ಮೂಡಿಸುವ ಹೋರಾಟ ಮುಂದುವರಿಯುತ್ತದೆ. ಹೋರಾಟ ಅಲ್ಲಿಗೇ ನಿಲ್ಲುವುದಿಲ್ಲ. ಉದ್ಯೋಗ ಕಳೆದುಕೊಂಡವರಿಗೆ ಪರಿಹಾರ ಕೊಟ್ಟಿಲ್ಲ. ಕಬ್ಬಿಣ, ಸೀಮೆಂಟ್, ದಿನಬಳಕೆ ವಸ್ತುಗಳ ಬೆಲೆಯೂ ಇಳಿಯಬೇಕು ಎಂದು ಆಗ್ರಹಿಸಿದರು.


