ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಸಾಧಕರಿಗೆ ಜರಿತಾರಿ ಶಾಲು ಹೊದಿಸಿ, ಗಂಧದ ಹಾರ ಹಾಕಿ ಸನ್ಮಾನಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಮಾತನ್ನೇ ಮುರಿದಿದ್ದಾರೆ ಎಂದು ಜಾನಪದ ತಜ್ಞೆ ಡಾ. ಸಂಧ್ಯಾರೆಡ್ಡಿ ಹೇಳಿದರು.
ತುಮಕೂರಿನಲ್ಲಿ ಕರ್ನಾಟಕ ಲೇಖಕಿಯರ ಸಂಘದಿಂದ ಹಮ್ಮಿಕೊಂಡಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಡಾ.ಶೈಲಾ ನಾಗರಾಜ್ ಅವರಿಗೆ ಇಂದಿರಾರತ್ನ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ಕನ್ನಡ ರಾಜ್ಯೋತ್ಸವ ಪುರಷ್ಕೃತರಿಗೆ ಜರಿತಾರಿ ಶಾಲುಗಳನ್ನು ಹೊದಿಸುವ ಬದಲು ನೂಲಿನ ವಸ್ತ್ರಗಳನ್ನು ಕೊಟ್ಟಿದ್ದರೆ ಹೆಚ್ಚು ಅನುಕೂಲವಾಗುತ್ತಿತ್ತು. ಆದರೂ ಮುಖ್ಯಮಂತ್ರಿಗಳು ತಾವೇ ಆಡಿದ ಮಾತುಗಳಿಗೆ ವಿರುದ್ದವಾಗಿ ನಡೆದುಕೊಂಡರು. ಅತ್ಯಂತ ಸಂಭ್ರಮದಿಂದ ಸಾಧಕರಿಗೆ ಗಂಧದ ಹಾರ ಮತ್ತು ಜರಿಶಾಲುಗಳನ್ನು ಹೊದಿಸಿದರು ಎಂದು ಟೀಕಿಸಿದರು.
ಕೇಂದ್ರ ಸಾಹಿತ್ಯ ಅಕಾಡೆಮಿ ಕೆಲವೇ ಸಾಹಿತಿಗಳ ಕುರಿತು ವಿಚಾರ ಸಂಕಿರಣ ನಡೆಸುತ್ತದೆ. ಉಳಿದವರ ಬಗ್ಗೆ ಗಮನಹರಿಸುವುದೇ ಇಲ್ಲ. ಅನಂತಮೂರ್ತಿ, ಗೋಪಾಲಕೃಷ್ಣ ಅಡಿಗ, ಶಿವರಾಮ ಕಾರಂತ, ಕುವೆಂಪು, ತೇಜಸ್ವಿ ಅವರನ್ನು ಬಿಟ್ಟರೆ ಕೇಂದ್ರ ಸಾಹಿತ್ಯ ಅಕಾಡೆಮಿ ಮುಖ್ಯಸ್ಥರು, ಸದಸ್ಯರಿಗೆ ಬೇರೆ ಸಾಹಿತಿಗಳು ಕಾಣುವುದೇ ಇಲ್ಲ ಎಂದು ಆರೋಪಿಸಿದರು.
ಅನಕೃ, ತರಾಸು, ಕೃಷ್ಣಮೂರ್ತಿ ಪುರಾಣಿಕ್, ಬಿ.ಎಲ್.ವೇಣು ಅವರ ಸಾಹಿತ್ಯ ಕುರಿತು ಯಾವುದೇ ಅಭಿಪ್ರಾಯ ಇರಲಿ. ಆದರೆ ಇಂತಹ ಸಾಹಿತಿ, ಕಾದಂಬರಿಕಾರರನ್ನು ಇತಿಹಾಸದಲ್ಲೇ ಇಲ್ಲದಂತೆ ಮರೆಮಾಚುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಶಿರಾ ಮತ್ತು ಹಿರಿಯೂರು ನಡುವಿನ ರಾಷ್ಟ್ರೀಯ ಹೆದ್ದಾರಿ 4ರ ಪಕ್ಕದಲ್ಲಿ ನಿಲ್ಲಿಸಿರುವ ನಾಮಫಲಕಗಳು ಅಪಭ್ರಂಶದಿಂದ ಕೂಡಿವೆ. ಕರೆಜವನಹಳ್ಳಿ ಬದಲು ಕರಜೀವನಹಳ್ಳಿ ಎಂಬ ನಾಮಫಲಕ ನಿಲ್ಲಿಸಲಾಗಿದೆ. ಕರೆಜವನ ಅಂದರೆ ಕಪ್ಪುಜವನ ಎಂಬ ಅರ್ಥವಿದೆ. ಆದರೆ ಈ ಹೆಸರನ್ನು ಅರ್ಥವಿಲ್ಲದ ಹಾಗೆ ಮಾಡಿದ್ದಾರೆ. ಬೂದಿಹಾಳ್ ಬದಲು ಬೂದಿಹಾಲ್, ಹಿತ್ನಾಲ್ ಆಗಿದೆ. ಒಂದು ಸ್ಥಳ ನಾಮದಲ್ಲಿ ಅಲ್ಲಿನ ಸಂಸ್ಕೃತಿ ಅಡಗಿರುತ್ತದೆ ಎಂದರು.
ನಾಮಫಲಕಗಳು ಸ್ಥಳ ನಾಮಗಳನ್ನು ಬಿಂಬಿಸಬೇಕು. ಸ್ಥಳ ನಾಮಗಳಿಗೆ ಹೆಚ್ಚಿನ ಮಹತ್ವ ಇದೆ. ಆದರೆ ಈ ನಾಮಫಲಕ ಬರೆಯುವವರು ಯಾರು? ನಿರ್ವಹಿಸುವವರು ಯಾರು? ಒಂದೂ ಗೊತ್ತಿಲ್ಲ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಚೇರಿ ಮುಖ್ಯಸ್ಥರಿಗೆ ನೋಟಿಸ್ ನೀಡುವ ಬದಲು ನಮ್ಮ ಸುತ್ತಮುತ್ತ ನಡೆಯುವ ಇಂತಹ ಅಪಭ್ರಂಶಗಳನ್ನು ಸರಿಪಡಿಸಲು ಮುಂದಾಗಬೇಕು ಎಂದು ಸಲಹೆ ಮಾಡಿದರು.
ಸ್ಥಳ ನಾಮಗಳ ಕುರಿತು ತಪ್ಪಾಗಿರುವ ಹೆಸರುಗಳನ್ನು ಕೂಡಲೇ ಬದಲಾಯಿಸುವ ಬಗ್ಗೆ ಸ್ಥಳೀಯ ಸಂಘಟನೆಗಳು ಹೋರಾಟ ರೂಪಿಸಬೇಕು. ಕನ್ನಡ ಸಂಸ್ಕೃತಿಯನ್ನು ಒಳಗೊಂಡಿರುವ ನಾಮಫಲಕಗಳಲ್ಲಿ ಹೆಸರುಗಳನ್ನು ಈ ರೀತಿ ಬದಲಾಯಿಸಿದರೆ ಹೇಗೆ? ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇಂತಹ ಕೆಲಸಗಳನ್ನು ನೋಡಿಕೊಳ್ಳಬೇಕು. ಸಂಬಂಧಪಟ್ಟವರಿಗೆ ನೋಟಿಸ್ ನೀಡಿ ಹೆಸರು ಸರಿಪಡಿಸುವಂತೆ ಮಾಡಬೇಕು ಎಂದು ಹೇಳಿದರು.