Friday, September 20, 2024
Google search engine
Homeಮುಖಪುಟಜೆಡಿಎಸ್ ಸಮಾವೇಶಕ್ಕೆ ಶಾಸಕ ಶ್ರೀನಿವಾಸ್ ಗೈರು - ಮೂರನೇ ವ್ಯಕ್ತಿಗೆ ಲಾಭವೇ ಇದು?

ಜೆಡಿಎಸ್ ಸಮಾವೇಶಕ್ಕೆ ಶಾಸಕ ಶ್ರೀನಿವಾಸ್ ಗೈರು – ಮೂರನೇ ವ್ಯಕ್ತಿಗೆ ಲಾಭವೇ ಇದು?

ಗುಬ್ಬಿಯಲ್ಲಿ ಜೆಡಿಎಸ್ ಸಮಾವೇಶ ನಡೆಯಿತು. ಜನರೂ ಸೇರಿದ್ದರು. ಸಮಾರಂಭಕ್ಕೂ ಮೊದಲು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ವಾಹನದಲ್ಲಿ ಮೆರವಣಿಗೆ ಕರೆದೊಯ್ಯಲಾಯಿತು. ಇದು ಕಾರ್ಯಕರ್ತರ ಗಮನ ಸೆಳೆಯಿತು. ಕುಮಾರಸ್ವಾಮಿ ಭಾಷಣದ ಬಹುತೇಕ ಸಮಯವನ್ನು ಶಾಸಕ ಶ್ರೀನಿವಾಸ್ ಕುರಿತು ಮಾತನಾಡಲು ಮೀಸಲಿಟ್ಟರು. ಅವರಿಗೆ ಮೋಸ ಮಾಡಿಲ್ಲ, ಪಕ್ಷದಿಂದ ಸಾಕಷ್ಟು ಪ್ರಯೋಜನಪಡೆದುಕೊಂಡಿರುವುದು ಅವರಿಗೂ ಗೊತ್ತು. ಅವರಿಗೆ ಪಕ್ಷದಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ಆದರೆ ಯಾಕೋ ಮುನಿಸಿಕೊಂಡಿದ್ದಾರೆ. ಎಲ್ಲೇ ಇರಲಿ ಭಗವಂತ ಅವರನ್ನು ಚೆನ್ನಾಗಿಟ್ಟಿರಲಿ ಎಂದು ಕಾರ್ಯಕರ್ತರ ಮನಸ್ಸು ಸೆಳೆಯುವ ಕೆಲಸ ಮಾಡಿದರು.

ತುಮಕೂರು ಜಿಲ್ಲೆಯ ಗುಬ್ಬಿ ಸರ್ಕಾರಿ ಕಾಲೇಜು ಮೈದಾನದಲ್ಲಿ ಸಮಾವೇಶ ಆಯೋಜಿದ್ದರು. ಜಿಲ್ಲೆಯ ಎಲ್ಲೆಡೆಯಿಂದ 7-8 ಸಾವಿರ ಮಂದಿ ಕಾರ್ಯಕರ್ತರು ಸಮಾವೇಶಕ್ಕೆ ಆಗಮಿಸಿದ್ದರು. ಸಮಾವೇಶದಲ್ಲಿ ಜನರು ಸೇರಿದ್ದರೂ ಅವರಲ್ಲಿ ಉಮ್ಮಸ್ಸು ಕಂಡುಬರಲಿಲ್ಲ. ಇಡೀ ಸಮಾವೇಶದಲ್ಲಿ ಒಂದು ರೀತಿಯ ಸಂಭ್ರಮಕ್ಕಿಂತ ಶಾಸಕ ಶ್ರೀನಿವಾಸ್ ಕುರಿತೇ ಚರ್ಚೆ ನಡೆಯುತ್ತಿತ್ತು. ಸಿ.ಎಸ್. ಪುರದ ನಾಗರಾಜ್ ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಯ ಸಮಾವೇಶ ಇಷ್ಟೊಂದು ಅದ್ದೂರಿಯಾಗಿ ನಡೆಸಲು ಶಾಸಕ ಶ್ರೀನಿವಾಸ್ ಅವರಿಗೆ ಸ್ಪಷ್ಟ ಸಂದೇಶ ರವಾನಿಸುವುದೇ ಆಗಿತ್ತು. ಜೆಡಿಎಸ್ ನಾಯಕರು ಸಂದೇಶ ರವಾಸಿದರೂ ಕೂಡ.

ವೇದಿಕೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಬಿಟ್ಟರೆ ಉಳಿದೆಲ್ಲ ಮುಖಂಡರೂ ಸ್ಥಳೀಯರೇ ಆಗಿದ್ದರು.ಜೆಡಿಎಸ್ ಜಿಲ್ಲಾಧ್ಯಕ್ಷರೂ ಉದ್ಘಾಟನೆ ವೇಳೆ ಕಾಣಲಿಲ್ಲ. ಮಾಜಿ ಶಾಸಕರು, ಹಾಲಿ ಶಾಸಕರಿಗೆ ಆದ್ಯತೆ ನೀಡಿರಲಿಲ್ಲ. ಬಿಜೆಪಿ ಮುಖಂಡ ನಾಗರಾಜ್ ಮತ್ತು ಜಿಲ್ಲಾ ಪಂಚಾಯಿತಿ ಮಹಿಳಾ ಸದಸ್ಯರೊಬ್ಬರು ಸೇರ್ಪಡೆಗೆ ಮಾತ್ರ ವೇದಿಕೆ ಸೀಮಿತವಾಗಿತ್ತು. ಆದರೆ ಜನ ಜಿಲ್ಲೆಯ ಎಲ್ಲೆಡೆಯಿಂದ ಬಂದಿದ್ದರು. ಜೆಡಿಎಸ್ ರಾಜ್ಯ ನಾಯಕರ ಬಗ್ಗೆ ಕಾರ್ಯಕರ್ತರಲ್ಲಿ ಸಾಕಷ್ಟು ಒಲವು ಇದ್ದರೂ ಗುಬ್ಬಿ ತಾಲೂಕಿನ ಮುಖಂಡರಲ್ಲಿ ಉತ್ಸಾಹ ಕಂಡುಬರಲಿಲ್ಲ. ನಾಗರಾಜ್ ಸೇರ್ಪಡೆ ಬಗ್ಗೆ ಅಪಸ್ವರವೂ ಕಾರ್ಯಕರ್ತರಲ್ಲಿ ಕೇಳಿಬಂತು.

ಪ್ರಮುಖವಾಗಿ ಸ್ಥಳೀಯ ಶಾಸಕ ವಾಸು ಅಲಿಯಾಸ್ ಎಸ್.ಆರ್. ಶ್ರೀನಿವಾಸ್ ಅವರ ಗೈರುಹಾಜರಿ ಎದ್ದುಕಾಣುತ್ತಿತ್ತು. ವಾಸು ಸಮಾವೇಶಕ್ಕೆ ಹೋಗುವುದಿಲ್ಲ ಎಂದು ಹೇಳಿದಂತೆ ನಡೆದುಕೊಂಡರು. ಸಮಾವೇಶದಿಂದ ದೂರವೇ ಉಳಿದು ರಾಜ್ಯ ಜೆಡಿಎಸ್ ಮುಖಂಡರಿಗೆ ಸ್ಪಷ್ಟ ಸಂದೇಶವನ್ನೂ ರವಾನಿಸಿದರು. ಶ್ರೀನಿವಾಸ್ ಗೈರಿನಲ್ಲೇ ಎಚ್.ಡಿ.ಕುಮಾರಸ್ವಾಮಿ ಅವರು, ಜಿ.ಪಂ ಸದಸ್ಯ ಆಗಿದ್ದ ಶ್ರೀನಿವಾಸ್ ಅವರಿಗೆ ಆರಂಭದಲ್ಲಿ ಟಿಕೆಟ್ ನೀಡಲು ಸಾಧ್ಯವಾಗದೆ ಇದ್ದುದು, ನಂತರ ಶ್ರೀನಿವಾಸ್ ಪಕ್ಷೇತರ ಅಭ್ಯರ್ಥಿ ಆಗಿ ಗೆದ್ದು ಶಾಸಕರಾಗಿದ್ದು, ಬಳಿಕ ಶ್ರೀನಿವಾಸ್ ಜೆಡಿಎಸ್ ಸೇರ್ಪಡೆಯಾಗಿದ್ದು, ಕುಮಾರಸ್ವಾಮಿ ಅವರ ಸಂಪರ್ಕಕ್ಕೆ ಬಂದದ್ದು, ಸಹೋದರರಂತೆ ಇದ್ದುದು, ಸಚಿವರನ್ನಾಗಿ ಮಾಡಿದ್ದು ಎಲ್ಲ ವಿಷಯಗಳನ್ನೂ ಸ್ಪಷ್ಟಪಡಿಸಿದರು.

ಕುಮಾರಸ್ವಾಮಿ ಇಷ್ಟೆಲ್ಲ ಬಿಡಿಸಿಬಿಡಿಸಿ ಹೇಳಿದರೂ ಶ್ರೀನಿವಾಸ್ ಮುನಿಸಿಗೆ ಕಾರಣವೇನು ಎಂಬುದನ್ನು ಬಹಿರಂಗಪಡಿಸಲಿಲ್ಲ ಮತ್ತು ಶ್ರೀನಿವಾಸ್ ಮಾಡಿದ್ದ ಆರೋಪಗಳಿಗೆ ಉತ್ತರ ಹೇಳುವ ಗೋಜಿಗೆ ಕುಮಾರಸ್ವಾಮಿ ಹೋಗಲಿಲ್ಲ. ಹಾಗಿದ್ದ ಮೇಲೆ ಶ್ರೀನಿವಾಸ್ ಅವರು ಜೆಡಿಎಸ್ ಪಕ್ಷದಿಂದ ಎರಡೂ ಕಾಲುಗಳನ್ನು ಹೊರಗಿಟ್ಟು ಆಗಿದೆ ಎಂಬ ತೀರ್ಮಾನಕ್ಕೆ ಜೆಡಿಎಸ್ ಬಂದಿದೆ ಎಂಬುದು ನಿಕ್ಕಿ ಆಗಿದೆ. ಜಿಲ್ಲಾ ಜೆಡಿಎಸ್ ಅಧ್ಯಕ್ಷರು ನೆಪಮಾತ್ರ ಪತ್ರಿಕಾಗೋಷ್ಠಿ ಕರೆದು ಶ್ರೀನಿವಾಸ್ ಸಮಾವೇಶಕ್ಕೆ ಬಂದೇ ಬರುತ್ತಾರೆ ಎಂದು ನಾಮಕಾವಸ್ತೆಗೆ ಹೇಳಿದ್ದರು. ಶ್ರೀನಿವಾಸ್ ಪಕ್ಷ ತೊರೆಯುವುದರಿಂದ ಆಗುವ ಏರುಪೇರುಗಳನ್ನು ಸರಿಪಡಿಸುವುದೇ ಪತ್ರಿಕಾಗೋಷ್ಟಿ ಉದ್ದೇಶವಾಗಿತ್ತು. ಜೆಡಿಎಸ್ ಜಿಲ್ಲಾ ಮುಖಂಡರು ಶ್ರೀನಿವಾಸ್ ಅವರನ್ನು ಮಾತನಾಡಿಸುವ ಪ್ರಯತ್ನವನ್ನೇ ಮಾಡಿಲ್ಲ ಎಂಬ ಚರ್ಚೆಗಳು ನಡೆಯುತ್ತಿವೆ.

ನಾಗರಾಜ್ ಸೇರ್ಪಡೆಗೆ ಗುಬ್ಬಿ ಜೆಡಿಎಸ್ ಘಟಕದಲ್ಲಿ ಭಿನ್ನ ಅಭಿಪ್ರಾಯಗಳಿದ್ದು ಇದು ಮುಂದಿನ ದಿನಗಳಲ್ಲಿ ಸ್ಫೋಟವಾಗುವ ಸಾಧ್ಯತೆ ಹೆಚ್ಚಾಗಿದೆ. ಸ್ಥಳೀಯ ಜೆಡಿಎಸ್ ಶಾಸಕರಿಲ್ಲದ ಸಮಾವೇಶ ಅದ್ದೂರಿಯಿಂದ ನಡೆದರೂ ಅಲ್ಲಿ ಚರ್ಚೆಯಾಗದ ವಿಷಯಗಳು ಹೊರಗೆ ಸದ್ದು ಮಾಡುತ್ತಿವೆ. ಜನ ಸೇರಿದ್ದಾರೆ ಅಂದರೆ ಅವೆಲ್ಲವೂ ಮತವಾಗಿ ಪರಿವರ್ತನೆಯಾಗುತ್ತವೆಯೇ? ಮತಗಳಾಗಿ ಪರಿವರ್ತನೆಯಾದರೆ ಜೆಡಿಎಸ್ ಗೆ ಅನುಕೂಲ, ಇಲ್ಲದಿದ್ದರೆ ಪ್ರತಿಕೂಲ ಪರಿಸ್ಥಿತಿ ನಿರ್ಮಾಣವಾಗಲಿದೆ. ಜೆಡಿಎಸ್ ತೀರ್ಮಾನ ಮೂರನೇ ವ್ಯಕ್ತಿ ಲಾಭವಾಗುವ ಸಾಧ್ಯತೆ ಇದೆ. ಇದು ಕುಮಾರಸ್ವಾಮಿ ಅವರ ಒಳಗಿನ ಆಸೆಯೂ ಇರಬಹುದೇ?!

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular