Friday, September 20, 2024
Google search engine
Homeಮುಖಪುಟಸಚಿವ ನಾಗೇಶ್ ಪ್ರಚೋದನಾತ್ಮಕ ಹೇಳಿಕೆ ಹಿಂಪಡೆಯಲು ಬರಗೂರು ರಾಮಚಂದ್ರಪ್ಪ ಆಗ್ರಹ

ಸಚಿವ ನಾಗೇಶ್ ಪ್ರಚೋದನಾತ್ಮಕ ಹೇಳಿಕೆ ಹಿಂಪಡೆಯಲು ಬರಗೂರು ರಾಮಚಂದ್ರಪ್ಪ ಆಗ್ರಹ

ಪಠ್ಯಪುಸ್ತಕಗಳ ಪರಿಷ್ಕರಣೆ ಸಂಬಂಧ ಸಚಿವ ಬಿ.ಸಿ.ನಾಗೇಶ್ ನೀಡಿರುವ ಪ್ರಚೋದನಾತ್ಮಕ ಹೇಳಿಕೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ನಾಡೋಜ ಬರಗೂರು ರಾಮಚಂದ್ರಪ್ಪ ಒತ್ತಾಯಿಸಿದ್ದಾರೆ.

ಪಠ್ಯಪುಸ್ತಕಗಳ ಪರಿಷ್ಕರಣೆ ಬಗ್ಗೆ ಕೆಲವು ಸುಳ್ಳುಗಳನ್ನು ಹಬ್ಬಿಸುತ್ತ ಬಂದವರ ಸಾಲಿಗೆ ಸಚಿವರು ಸೇರಿಕೊಂಡಿರುವುದು ವಿಷಾದನೀಯ ಸಂಗತಿ. ನಾನು ಮೊದಲಿನಿಂದಲೂ ‘ಪಠ್ಯಪುಸ್ತಕಗಳು ಪಕ್ಷಪುಸ್ತಕಗಳಲ್ಲ’ ಎಂದು ಎಲ್ಲಾ ಪಕ್ಷಗಳ ಸರ್ಕಾರಗಳಿಗೆ ಹೇಳುತ್ತಾ ಬಂದಿದ್ದು, ಈಗಲೂ ಪಕ್ಷಪೂರ್ವಾಗ್ರಹವನ್ನು ವಿರೋಧಿಸುತ್ತೇನೆ. ಸುಳ್ಳು ಸುದ್ದಿಗೆ ಸಚಿವರೇ ಶಾಮೀಲಾಗುವುದನ್ನು ವಿರೋಧಿಸುತ್ತೇನೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸಚಿವರು ಹೇಳಿದಂತೆ ಕುವೆಂಪು ರಚನೆಯನ್ನು ಕೈಬಿಟ್ಟಿಲ್ಲ. ಏಳನೇ ತರಗತಿ ಪಠ್ಯದಲ್ಲಿ ದೇಶಭಕ್ತಿಗೆ ಬದ್ದವಾದ ಕುವೆಂಪು ಅವರ ‘ಭರತ ಭೂಮಿ ನಮ್ಮ ತಾಯಿ’ ಪಠ್ಯವನ್ನು ಸೇರಿಸಲಾಗಿದೆ. ಕನ್ನಡ ಪಠ್ಯಗಳ ರಕ್ಷಾಪುಟದ ಒಳಬದಿಯಲ್ಲಿ ನಾಡಗೀತೆಯನ್ನು ಕೊಡಲಾಗಿದೆ.

ಇನ್ನು ಕೆಲವರು ಅಪಪ್ರಚಾರ ಮಾಡಿದಂತೆ ಕೆಂಪೇಗೌಡರ ವಿವರಗಳನ್ನು ಕೈಬಿಟ್ಟಿಲ್ಲ. ಏಳನೇ ತರಗತಿ ಸಮಾಜ ವಿಜ್ಞಾನದಲ್ಲಿ ಕೊಡಲಾಗಿದೆ. ಹಿಂದೆ ವಿವೇಕಾನಂದ ಬಗ್ಗೆ ಪಾಠ ಇರಲಿಲ್ಲ, ಸೇರಿಸಲಾಗಿದೆ. ಅಲ್ಲಿ ತಪ್ಪುಗಳಿದ್ದರೆ ಸರಿಪಡಿಸಲಿ, ಆದರೆ ಸಕಾರಣಾತ್ಮಕವಾಗಿ ಪರಿಶೀಲನೆ ಮಾಡುವ ಬದಲು ಕುವೆಂಪು, ಕೆಂಪೇಗೌಡರು, ವಾಲ್ಮೀಕಿ ಮುಂತಾದವರನ್ನು ಉದ್ದೇಶಪೂರ್ವಕವಾಗಿ ಉಲ್ಲೇಖಿಸಿ, ಸುಳ್ಳಿನ ಬೇಳೆ ಬೇಯಿಸಿಕೊಳ್ಳಲು ಹೊರಡಲಾಗಿದೆ ಎಂದು ಆಕ್ಷೇಪಿಸಿದ್ದಾರೆ.

ನನ್ನ ಸರ್ವಾಧ್ಯಕ್ಷತೆಯ 27 ಸಮಿತಿಗಳು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನಲ್ಲೇ ಕೆಲಸ ಮಾಡಿವೆ. ಹಿಂದೆ ಕನ್ನಡ ಪ್ರಥಮ ಭಾಷೆಯ ಹತ್ತನೇ ತರಗತಿವರೆಗಿನ ಪಠ್ಯಪುಸ್ತಕದ 81 ಪಾಠಗಳಲ್ಲಿ ಒಂದೇ ಪ್ರದೇಶಕ್ಕೆ ಸೇರಿದ 33 ಲೇಖಕರ ರಚನೆಗಳಿದ್ದವು. ಒಂದೇ ಸಮುದಾಯದ 29 ಜನ ಲೇಖಕರಿದ್ದರು. ನಾವು ಪರಿಷ್ಕರಣೆ ಮಾಡುವಾಗ ಸಾಮಾಜಿಕ, ಪ್ರಾದೇಶಿಕ ಮತ್ತು ಮಹಿಳಾ ನ್ಯಾಯವನ್ನು ಪಾಲಿಸಿದ್ದೇವೆ.

ಹಿಂದಿನ ಪಠ್ಯಗಳಲ್ಲಿ ಕೈಬಿಟ್ಟಿದ್ದ ಮಾಸ್ತಿ, ಅಡಿಗ, ಸಿದ್ಧಯ್ಯ ಪುರಾಣಿಕ, ಶಾಂತರಸ, ಮುಂತಾದವರ ರಚನೆಗಳನ್ನು ಸೇರಿಸಿದ್ದೇವೆ. ಉರ್ದುಪಠ್ಯದಲ್ಲಿ ‘ರಾಷ್ಟ್ರೀಯ ಭಾವೈಕ್ಯತೆ’ ಮತ್ತು ಮರಾಠಿ ಪಠ್ಯದಲ್ಲಿ ‘ಭಾಷಾ ಬಾಂಧವ್ಯ’ ಕುರಿತು ಹೊಸಪಾಠಗಳನ್ನು ಬರೆಸಿ ಸೇರಿಸಲಾಗಿದೆ. ಯಾವುದೇ ಧರ್ಮ ಪ್ರವರ್ತಕರಲ್ಲೂ ವ್ಯತ್ಯಾಸ ಮಾಡದೆ, ಶಂಕರಾಚಾರ್ಯ, ಮತ ರಾಮಾನುಜಾಚಾರ್ಯ, ಮಧ್ವಾಚಾರ್ಯ, ಬಸವಣ್ಣ, ಕನಕದಾಸ, ಪುರಂದರದಾಸ, ನಾರಾಯಣಗುರು ಮುಂತಾದ ಅನೇಕರ ಪ್ರಾತಿನಿಧಿಕ ವಿವರಗಳೂ ಇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಇಷ್ಟಾಗಿಯೂ ದೋಷಗಳು ಉಳಿದಿದ್ದರೆ, ‘ಆಯಾ ವಿಷಯ ತಜ್ಞರು’ ಪರಿಶೀಲಿಸಿ, ಸರಿಪಡಿಸಲಿ, ಆದರ ಬದಲು ಹಾದಿಯ ಬೀದಿಯ ಜಗಳಕ್ಕೆ ಕಾಲು ಕರೆಯುವುದು ಸಭ್ಯತೆಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular