ಅಂಬೇಡ್ಕರ್ ಅವರೊಬ್ಬ ಮಹಾನ್ ವ್ಯಕ್ತಿ ಹಾಗೂ ದೇಶ ಕಂಡ ಒಬ್ಬ ಅಪರೂಪದ ನಾಯಕ. ದಲಿತರಿಗೆ ಮಾತ್ರವಲ್ಲದೆ ಎಲ್ಲಾ ಶೋಷಿತರಿಗೆ ಗೌರವ ತಂದುಕೊಡಲು ಪ್ರಯತ್ನಿಸಿದರಲ್ಲದೇ, ದೇಶದಲ್ಲಿ ಸಾಮಾಜಿಕ ನ್ಯಾಯ ಸಿಗದವರ ಪರವಾಗಿ ಹೋರಾಟ ಮಾಡಿದವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ರವರ 69ನೇ ಮಹಾ ಪರಿನಿರ್ವಾಣ ದಿನದ ಅಂಗವಾಗಿ ವಿಧಾನಸೌಧದ ಆವರಣದಲ್ಲಿರುವ ಬಾಬಾ ಸಾಹೇಬರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿ ಅವರು ಮಾತನಾಡಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದೇಶಕ್ಕೆ ಎಂತಹಾ ಸಂವಿಧಾನದ ಅಗತ್ಯವಿದೆ ಎಂದು ಯೋಚಿಸಿ, ಇತರೆ ದೇಶಗಳ ಸಂವಿಧಾನವನ್ನು ಅಭ್ಯಾಸ ಮಾಡಿ, ಅತ್ಯಂತ ಶ್ರೇಷ್ಠ ಸಂವಿಧಾನವನ್ನು ಕೊಟ್ಟಿದ್ದಾರೆ. ನಮ್ಮ ಸಾಮಾಜಿಕ ವ್ಯವಸ್ಥೆಯ ಬದಲಾವಣೆಯಾಗಬೇಕು, ಎಲ್ಲರಿಗೂ ಸಮಾನ ಅವಕಾಶಗಳು ದೊರಕಬೇಕು ಹಾಗೂ ಸಾಮಾಜಿಕ ನ್ಯಾಯ ಸ್ಥಾಪನೆಯಾಗಬೇಕು ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದರು.
ಶಾಲಾ ಕಾಲೇಜು ಮಕ್ಕಳಿಗೆ ಇದರ ಅರಿವು ಮೂಡಿಸಲು ಸಂವಿಧಾನ ಪೀಠಿಕೆಯನ್ನು ನಿತ್ಯ ಬೋಧಿಸಲಾಗುತ್ತಿದೆ. ಸಂವಿಧಾನವು ಪ್ರತಿಯೊಬ್ಬರಿಗೂ ಹಕ್ಕು ಮತ್ತು ಬಾಧ್ಯತೆಗಳನ್ನು ನೀಡಿದೆ. ಸಂವಿಧಾನದ ಧ್ಯೇಯೋದ್ದೇಶಗಳು ಎಲ್ಲರಿಗೂ ಅರ್ಥವಾಗಬೇಕು ಎಂಬ ಕಾರಣದಿಂದ ಸರ್ಕಾರ ಇದನ್ನು ಜಾರಿ ಮಾಡಿದೆ ಎಂದು ಹೇಳಿದರು.
ಅಂಬೇಡ್ಕರ್ ಅವರ ಪರಿನಿರ್ವಾಣ ದಿನದಂದು ನಾವು ಅವರನ್ನು ಸ್ಮರಿಸುವ ಕೆಲಸವನ್ನು ಮಾಡಿದ್ದೇವೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಅವರ ಕೊನೆಯ ದಿನಗಳಲ್ಲಿ ಬೌದ್ಧ ಧರ್ಮವನ್ನು ಸ್ವೀಕರಿಸಿದರು. ಹುಟ್ಟುವಾಗ ಹಿಂದೂವಾಗಿದ್ದೆ, ಸಾಯುವಾಗ ಹಿಂದೂವಾಗಿ ಸಾಯಲಾರೆ ಎಂದಿದ್ದರು. ಹಿಂದೂ ಧರ್ಮದ ಸುಧಾರಣೆಗೆ ಪ್ರಯತ್ನಪಟ್ಟು, ಅದು ಸಾಧ್ಯವಾಗದ ಹಿನ್ನೆಲೆಯಲ್ಲಿ ಬೌದ್ಧ ಧರ್ಮ ಸ್ವೀಕರಿಸಿದ್ದೇನೆ ಎಂದೂ ಹೇಳಿದ್ದರು. ಹಿಂದೂ ಧರ್ಮದಲ್ಲಿರುವ ಸಾಮಾಜಿಕ ವ್ಯವಸ್ಥೆಗೆ ರೋಸಿಹೋಗಿ ಹೀಗೆ ಮಾಡಿದ್ದರು ಎಂದು ತಿಳಿಸಿದರು.


