ರಾಜಧಾನಿ ಬೆಂಗಳೂರು ಕೇಂದ್ರಿತ ಯೋಜನೆಯ ಲಾಭಕ್ಕಾಗಿ ನಂದಿಹಳ್ಳಿ-ಮಲ್ಲಸಂದ್ರ-ವಸಂತನರಸಾಪುರ ಬೈಪಾಸ್ ರಸ್ತೆ ನಿರ್ಮಾಣ ಭೂಸ್ವಾದೀನ ಅಧಿಸೂಚನೆ ವಾಪಸ್ ಪಡೆದು ಹಾಲಿ ಇರುವ ರಸ್ತೆಗಳನ್ನೆ ಆಧುನೀಕರಿಸಿ ಅಭಿವೃದ್ಧಿಪಡಿಸಬೇಕೆಂದು ಒತ್ತಾಯಿಸಿ ರೈತಪರ ಸಂಘಟನೆಗಳ ನೇತೃತ್ವದಲ್ಲಿ ತುಮಕೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಕರ್ನಾಟಕ ರಾಜ್ಯ ರೈತ ಸಂಘದ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು, ಔಟರ್ ರಿಂಗ್ ರಸ್ತೆಯಿಂದ ಫಲವತ್ತಾದ ಭೂಮಿ ರೈತರ ಕೈತಪ್ಪಿ ಹೋಗಲಿದೆ. ನೂರಾರು ಎಕರೆಗಳಲ್ಲಿನ ತೆಂಗು, ಅಡಿಕೆ, ಮಾವು, ಹಲಸು, ಬಾಳೆಯ ತೋಟ, ಮನೆ-ಮಠ ಬದುಕನ್ನು ನಾಶ ಮಾಡಿ ರೈತರನ್ನು ಬೀದಿಗೆ ತಳ್ಳಿ ನಿರುದ್ಯೋಗ ಹೆಚ್ಚಿಸುವ, ಪರಿಸರ, ಅಂತರಜಲ ಮಲಿನಗೊಳಿಸಿ, ರೋಗ-ರುಜಿನ ಹೆಚ್ಚಿಸಿ ಆಹಾರ ಭದ್ರತೆಗೆ ಧಕ್ಕೆ ತರುವ ಭ್ರಷ್ಟಾಚಾರದ ರಿಯಲ್ ಎಸ್ಟೇಟ್ ದಂಧೆಗೆ ಮಣಿದು ರೈತರ ಭೂಮಿಯನ್ನು ಕಸಿಯುವ ಬೈಪಾಸ್ ರಸ್ತೆ ನಿರ್ಮಾಣ ಭೂಸ್ವಾಧೀನ ಅಧಿಸೂಚನೆಯನ್ನು ವಾಪಸಾತಿ ಮಾಡಬೇಕೆಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಸಂಯುಕ್ತ ಕಿಸಾನ್ ಮೋರ್ಚಾದಿಂದ ದೇಶದಾದ್ಯಂತ ಇಂತಹ ಹಲವಾರು ರೈತ ವಿರೋಧಿ ಭೂಸ್ವಾಧೀನದ ವಿರುದ್ದ ಹೋರಾಟ ನಡೆಸಿ, ಸಾವಿರಾರು ಎಕರೆ ಭೂಮಿಯನ್ನು ರೈತರಿಗೆ ಹಿಂದಿರುಗಿಸಿದ್ದೇವೆ. ನಿಮ್ಮ ಅನುಮತಿಯಿಲ್ಲದೆ ಅಧಿಕಾರಿಗಳು ಭೂಮಿ ಅಳತೆಗೆ ಬಂದರೆ ಹೆಣ್ಣು ಮಕ್ಕಳು ಪೊರಕೆ, ಗಂಡು ಮಕ್ಕಳು ಚಾವಟಿ ಹಿಡಿದು ಹೋರಾಟಕ್ಕೆ ಸಿದ್ದರಾಗಬೇಕಾಗಿದೆ ಎಂದರು.
ಮಾಜಿ ಶಾಸಕ ಹೆಚ್.ನಿಂಗಪ್ಪ, ಯಶವಂತ್, ಶಂಕರಪ್ಪ, ಅಜ್ಜಪ್ಪ, ಸ್ವಾಮಿ, ಕಂಬೇಗೌಡ, ರಮೇಶ್ ಭೈರಸಂದ್ರ, ಸಿದ್ದಗಂಗಯ್ಯ, ನಿಂಗರಾಜು, ಉದಯಕುಮಾರ್, ಮೋಹನ್‌ಕುಮಾರ್, ಗಿರೀಶ್, ಚಿಕ್ಕಣ್ಣ, ಮಂಜುನಾಥ್, ಶ್ರೀನಿವಾಸ್ ಇದ್ದರು.


