ಯುವಕರು ಕ್ರೀಡೆಗಳ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿ ದೇಶದ ಆಸ್ತಿಯಾಗಬೇಕು ಎಂದು ಗ್ರಾಮಾಂತರ ಶಾಸಕ ಬಿ. ಸುರೇಶ್‌ಗೌಡ ತಿಳಿಸಿದರು.
ತುಮಕೂರು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ವಿವೇಕಾನಂದ ಕ್ರೀಡಾ ಸಂಸ್ಥೆ ಹಾಗೂ ರಾಜ್ಯ ಖೋ ಖೋ ಸಂಸ್ಥೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಪುರುಷರ ಹಾಗೂ ಮಹಿಳೆಯರ ಖೋ ಖೋ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಆರೋಗ್ಯವಂತ ಯುವಕರಿಂದ ದೇಶ ಮತ್ತಷ್ಟು ಬಲಿಷ್ಠವಾಗುತ್ತದೆ. ಹಾಗಾಗಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡೆಯಲ್ಲಿ ತೊಡಗಿಕೊಳ್ಳಬೇಕು. ಆಗ ಮಾತ್ರ ದೇಶ ವಿಶ್ವದಲ್ಲೇ ನಂ. 1 ಸ್ಥಾನಕ್ಕೆ ತಲುಪಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಮನುಷ್ಯನಿಗೆ ಆರೋಗ್ಯ ಬಹಳ ಮುಖ್ಯ. ಲಕ್ಷ, ಕೋಟಿ ಇದ್ದರೂ ಆರೋಗ್ಯ ಸಂಪಾದನೆ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಸಹ ಕ್ರೀಡೆಯಲ್ಲಿ ತೊಡಗಿಕೊಂಡು ಉತ್ತಮ ಆರೋಗ್ಯ ಹೊಂದಬೇಕು ಎಂದು ಸಲಹೆ ನೀಡಿದರು.
ರಾಜ್ಯ ಖೋಖೋ ಫೆಡರೇಷನ್ ಅಧ್ಯಕ್ಷ ಲೋಕೇಶ್ವರ್, ವಿಜೇತ ತಂಡಗಳು ಹಾಗೂ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಿ ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ ರಾಷ್ಟ್ರಮಟ್ಟದ ಕ್ರೀಡಾಪಟುಗಳಿಗೆ ಉದ್ಯೋಗ ನೇಮಕಾತಿಯಲ್ಲಿ ಶೇ. 3 ರಷ್ಟು ಮೀಸಲಾತಿಯನ್ನು ಜಾರಿಗೊಳಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ ಎಂದು ಹೇಳಿದರು.
ಖೋಖೋ ಮೊದಲಿನಂತೆ ಮಣ್ಣಿನ ಆಟವಾಗಿ ಇಲ್ಲ. ಕ್ರೀಡೆಯ ಲಾಭಾಂಶಗಳು ಜಾಸ್ತಿಯಾಗಿ ಬೆಳೆದಿವೆ. ಅಲ್ಟಿಮೆಟ್ ಖೋಖೋ ಕ್ರೀಡೆಯಲ್ಲಿ ಭಾಗವಹಿಸುವ ಮಕ್ಕಳು 15 ರಿಂದ 20 ಲಕ್ಷದವರೆಗೆ ಹಣ ಗಳಿಸಲು ಅವಕಾಶ ಇದೆ. ಇದರಿಂದ ಮಧ್ಯಮ ವರ್ಗದ ಮಕ್ಕಳಿಗೆ ತುಂಬಾ ಅನುಕೂಲವಾಗುತ್ತಿದೆ ಎಂದರು.
ವಿವೇಕಾನಂದ ಕ್ರೀಡಾ ಸಂಸ್ಥೆ ಅಧ್ಯಕ್ಷ ಹೆಚ್.ಡಿ.ಕುಮಾರ್, ಗೌರವಾಧ್ಯಕ್ಷ ರಾಮಕೃಷ್ಣಯ್ಯ, ಉಪಾಧ್ಯಕ್ಷ ಎನ್.ನರಸಿಂಹರಾಜು, ಮಾಜಿ ಅಧ್ಯಕ್ಷ ಧನಿಯಾಕುಮಾರ್, ಕಾರ್ಯದರ್ಶಿ ವಿನಯ್, ಜಂಟಿ ಕಾರ್ಯದರ್ಶಿ ಪ್ರೀತಂ, ಖಜಾಂಚಿ ಎಸ್.ಎನ್.ಹರೀಶ್, ಹಿರಿಯ ಕ್ರೀಡಾ ತರಬೇತುದಾರ ರವೀಶ್, ಪ್ರದೀಪ್‌ಕುಮಾರ್, ವಿವಿಧ ಸಂಘಟನೆಗಳ ಮುಖಂಡರಾದ ಸೋಮಶೇಖರ್, ವೀರಭದ್ರಯ್ಯ, ಚಂದ್ರಶೇಖರ, ಸುರೇಶ್ ಭಾಗವಹಿಸಿದ್ದರು.
ಕುರುಬೂರು ತಂಡ ವಿನ್ನರ್
ರಾಜ್ಯ ಮಟ್ಟದ ಖೋಖೋ ಪಂದ್ಯಾವಳಿಯಲ್ಲಿ ಕುರುಬೂರು ಕಾವೇರಿ ಕಪಿಲಾ ಸ್ಪೋರ್ಟ್ಸ್ ಕ್ಲಬ್ ತಂಡ ಮೂಡುಬಿದರೆಯ ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್ ವಿರುದ್ಧ 16-09 ಅಂಕ ಗಳಿಸಿ ಜಯ ಗಳಿಸಿತು. ಕುರುಬೂರು ತಂಡದ ಚೈತ್ರ ಬಿ. ಅವರು 3.30 ನಿಮಿಷ ಆಟವಾಡಿ 1 ಅಂಕ ಗಳಿಸಿದರು. ಮೋನಿಕಾ 1.50 ಆಟವಾಡಿ 1 ಅಂಕ ಗಳಿಸಿದರು.
ಅಂತಿಮ ಫೈನಲ್ ಪಂದ್ಯದಲ್ಲಿ ಕುರುಬೂರು ತಂಡದ ವಿರುದ್ದ ಸೋಲನುಭವಿಸಿ ರನ್ನರ್ ಅಪ್ ಆದ ಆಳ್ವಾಸ್ ತಂಡದ ಅಪೂರ್ವ 1.30 ಹಾಗೂ 1 ನಿಮಿಷ ಆಟವಾಡಿ 1 ಅಂಕ ಗಳಿಸಿದರು. ಬೆಂಗಳೂರಿನ ಬಿಸಿವೈಎ ತಂಡ 3ನೇ ಸ್ಥಾನ, ಕ್ಯಾತನಹಳ್ಳಿಯ ಕೆಕೆಓ ತಂಡ 4ನೇ ಸ್ಥಾನ ಪಡೆಯಿತು.


