ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎನ್.ಡಿ.ಎ ಜೊತೆ ಜೆಡಿಯು ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಪಕ್ಷದ ಅಧ್ಯಕ್ಷ ಮಹಿಮಾ ಪಟೇಲ್ ಸ್ಪಷ್ಟಪಡಿಸಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎನ್.ಡಿ.ಎ ಜೊತೆ ಮೈತ್ರಿ ಇಲ್ಲ, ಅವರ ಬೆಂಬಲ ಕೋರುತ್ತೇವೆ, ಕೊಟ್ಟರೆ ಬೆಂಬಲ ಪಡೆಯುತ್ತೇವೆ. ಇಲ್ಲವಾದರೆ ಜೆಡಿಯು ಪ್ರತ್ಯೇಕವಾಗಿ ಸ್ಪರ್ಧೆ ಮಾಡುತ್ತದೆ ಎಂದರು.
ಈಗಿನ ಚುನಾವಣೆ ವ್ಯವಸ್ಥೆ ಬಗ್ಗೆ ಎಲ್ಲರಿಗೂ ಬೇಸರವಾಗಿದೆ. ಆದರೆ ಸರಿಮಾಡುವವರು ಯಾರು? ನಾವೆಲ್ಲರೂ ಸರಿಮಾಡಬೇಕು. ಮಾಡಬೇಕು ಎಂಬ ಆಲೋಚನೆ ಮಾಡಿ ಮುಂದುವರೆದರೆ ಸಾಧ್ಯವಾಗುತ್ತದೆ. ನಮಗೆ ಎಂತಹ ಭವಿಷ್ಯ ಬೇಕು ಎಂದು ನಾವು ಚಿಂತನೆ ಮಾಡದೆ ಇನ್ಯಾರು ಮಾಡಬೇಕು? ಪ್ರಸ್ತುತ ರೀತಿಯ ಆಡಳಿತ ಹಾಗೂ ರಾಜಕೀಯ ವ್ಯವಸ್ಥೆಯ ಸುಧಾರಣೆಯ ಬಗ್ಗೆ ಎಲ್ಲರಲ್ಲಿಯೂ ಆಲೋಚನೆ ಬರಬೇಕು ಎಂದರು.
ಆಗ್ನೇಯ ಪದವಿಧರರ ಕ್ಷೇತ್ರದ ಜೆಡಿಯು ಅಭ್ಯರ್ಥಿ ಡಾ.ಕೆ.ನಾಗರಾಜು ಮಾತನಾಡಿ, ಈಗಾಗಲೇ ಸಾಕಷ್ಟು ಬಾರಿ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಸಭೆಗಳನ್ನು ನಡೆಸಿದ್ದೇವೆ. ಯಾವುದೇ ಪಕ್ಷದ ಬೆಂಬಲದ ಬಗ್ಗೆ ರಾಜ್ಯಾಧ್ಯಕ್ಷರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಮತದಾರರ ನೋಂದಣಿ ಬಗ್ಗೆ ವ್ಯಾಪಕ ಪ್ರಚಾರ ಮಾಡುತ್ತಿದ್ದೇವೆ. ಹಿಂದಿನ ಚುನಾವಣೆಗಳಲ್ಲಿ ಮತ ಚಲಾಯಿಸಿರುವ ಪದವಿಧರ ಮತದಾರರೂ ಈ ಬಾರಿಯೂ ಮತ್ತೆ ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಸಬೇಕು. ಅದಕ್ಕಾಗಿ ಕ್ಷೇತ್ರದಾದ್ಯಂತ ಪ್ರಚಾರ ಮಾಡಿ ನೋಂದಣಿ ಮಾಡಿಸಲು ಪದವಿಧರರಲ್ಲಿ ಜಾಗೃತಿ ಮೂಡಿಸುತ್ತಿರುವುದಾಗಿ ಹೇಳಿದರು.
ಜೆಡಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಆರ್.ರಂಗನಾಥ್, ಹೆಚ್.ಸಿ.ಸುರೇಶ್, ಯುವಘಟಕ ಕಾರ್ಯಾಧ್ಯಕ್ಷ ಡಿ.ಜೆ.ಪ್ರಭು, ವಕ್ತಾರ ಮೋಹನ್, ನಗರ ಅಧ್ಯಕ್ಷ ಪರಮೇಶ್ ಸಿಂಧಗಿ, ಮುಖಂಡರಾದ ಮಂಜುನಾಥ್, ಮೈನಾವತಿ, ಶಾಂತಕುಮಾರಿ ಭಾಗವಹಿಸಿದ್ದರು.


