ಶಸ್ತ್ರವಿಲ್ಲದೆ ಯುದ್ಧ ಗೆಲ್ಲಲು ಸಾಧ್ಯವೆಂಬುದನ್ನು ಸಾಧಿಸಿ ತೋರಿಸಿದ ಮಹಾತ್ಮ ಗಾಂಧಿ, ತನ್ನ ವೈರಿಗಳಿಗೂ ಮಾನವೀಯತೆಯ ಕಣ್ಣುತೆರೆಸಿದ ಮಹಾನ್ ಸಂತ, ಧರ್ಮದ ಹಾದಿಯಲ್ಲಿ ನಡೆಸಿದ ದಾರ್ಶನಿಕ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಜಗದ ಕಷ್ಟಗಳಿಗೆಲ್ಲ ಮರುಗುತ್ತಿದ್ದ ಬಾಪುವಿನ ಹೃದಯದೊಳಗೆ ಅದೆಷ್ಟು ಕರುಣೆ, ಪ್ರೀತಿ ತುಂಬಿತ್ತೆಂದು ಊಹಿಸುವುದು ಅಸಾಧ್ಯ.
ಸತ್ಯ, ಶಾಂತಿ, ಸಹನೆ, ಸರ್ವಧರ್ಮ ಸಮಭಾವ ಗಾಂಧೀಜಿಯವರ ಚಿಂತನೆಗಳಾಗಿರಲಿಲ್ಲ, ಅದು ಜೀವನ ಮಾರ್ಗವಾಗಿತ್ತು. ಜಗತ್ತು ಹಿಂಸೆ, ಅಶಾಂತಿಗಳ ದಾಳಿಗೆ ಒಳಗಾದಾಗಲೆಲ್ಲ ಮತ್ತೆ ಮತ್ತೆ ನೆನಪಾಗುವವರು ಗಾಂಧಿ ಎಂದು ಹೇಳಿದ್ದಾರೆ.
ಅ.2ರಂದು ಮಹಾತ್ಮ ಗಾಂಧಿಯವರ ಜನ್ಮದಿನ. ಅವರ ಸೇವೆ, ಸಮರ್ಪಣಾಭಾವ, ತ್ಯಾಗ, ಬಲಿದಾನವನ್ನು ಅತ್ಯಂತ ಗೌರವದಿಂದ ಸ್ಮರಿಸಿ, ನಮಿಸುತ್ತೇನೆ ಎಂದು ಹೇಳಿದ್ದಾರೆ.
ದ್ವೇಷ, ಹಿಂಸೆ, ಅನ್ಯಾಯಗಳ ಅಂಧಕಾರ ಆವರಿಸಿದಂತೆಲ್ಲಾ ಅದರಿಂದ ಹೊರಬರಲು ಮತ್ತೆ ಮತ್ತೆ ನೆನಪಾಗುವುದು ಬಾಪು. ಅವರು ತೋರಿದ ಜೀವಪರ ಚಿಂತನೆಗಳ ಆದರ್ಶದ ಹಾದಿ ಎಂದರು.
ಜಗತ್ತು ಇಂದಿಗೂ ಭಾರತವನ್ನು ಗಾಂಧಿ ಭಾರತವೆಂದು ಗುರುತಿಸುತ್ತಿರುವುದು ಆ ಸಂತನಿಗೆ ಸಲ್ಲಿಸುತ್ತಿರುವ ಗೌರವ ಎಂದು ಭಾವಿಸಿದ್ದೇನೆ. ಗಾಂಧಿವಾದ ಅಮರವಾಗಲಿ ಎಂದು ತಿಳಿಸಿದ್ದಾರೆ.
ಇದೇ ವೇಳೆ ಶಾಸ್ತ್ರಿಯವರ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ. ಬ್ರಿಟಿಷರ ಸರ್ವಾಧಿಕಾರಿ ಧೋರಣೆಯ ವಿರುದ್ಧ ಸಿಡಿದೆದ್ದು ದೇಶದ ಸ್ವಾತಂತ್ರ್ಯ ಚಳವಳಿಗೆ ಧುಮುಕಿದ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಪರಕೀಯರ ಆಳ್ವಿಕೆಯಿಂದ ದೇಶವನ್ನು ಮುಕ್ತಗೊಳಿಸಿದ ನಂತರವೂ ಸಾರ್ವಜನಿಕ ಬದುಕಿನಿಂದ ವಿಮುಖರಾಗಲಿಲ್ಲ. ಬಡತನ, ಅನಕ್ಷರತೆ, ಸಾಮಾಜಿಕ ಸಮಸ್ಯೆಗಳಿಂದ ಬಳಲುತ್ತಿದ್ದ ಭಾರತದ ಪುನಶ್ಚೇತನಕ್ಕಾಗಿ ಸಕ್ರಿಯ ರಾಜಕಾರಣ ಸೇರಿ ರಾಷ್ಟ್ರನಿರ್ಮಾಣಕ್ಕಾಗಿ ದುಡಿದರು ಎಂದು ಸ್ಮರಿಸಿದ್ದಾರೆ.
ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಬದುಕು ಭಾರತೀಯರೆಲ್ಲರಿಗೂ ಪ್ರೇರಣಾದಾಯಕ ಎಂದು ಹೇಳಿದ್ದಾರೆ.


