ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತ ಕಳ್ಳತನ ಮಾಡುವುದು ಎಷ್ಟು ಅಪರಾಧವೋ ಚುನಾವಣೆ ಸಂದರ್ಭದಲ್ಲಿ ಮತ ಖರೀದಿ ಮಾಡುವುದೂ ಅಷ್ಟೇ ಅಪರಾಧ ಎಂದು ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ತಿಳಿಸಿದರು.
ತುಮಕೂರು ನಗರದ ಕನ್ನಡ ಭವನದಲ್ಲಿ ಬಹುಜನ ಸಮಾಜ ಪಕ್ಷದ ಜಿಲ್ಲಾ ಸಮೀಕ್ಷಾ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಮತ ಕಳ್ಳತನದ ಬಗ್ಗೆ ಕೆಲವು ರಾಜಕೀಯ ಪಕ್ಷಗಳು ರಾಷ್ಟ್ರ ಮಟ್ಟದಲ್ಲಿ ಕೆಸರೆರೆಚಾಟ ಶುರುಮಾಡಿ, ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿವೆ. ಮತಕಳ್ಳತನ ಅಪರಾಧವೇ ಹಾಗೇ, ಚುನಾವಣೆ ಸಮಯದಲ್ಲಿ ಮತದಾರರಿಗೆ ಹಣ, ಕಾಣಿಕೆ ನೀಡಿ ಮತ ಖರೀದಿ ಮಾಡುವುದೂ ಅಪರಾಧ. ಮತ ಖರೀದಿ ತಡೆಗೆ ಚುನಾವಣಾ ಆಯೋಗ ಕಟ್ಟೆಚ್ಚರದ ಕ್ರಮ ತೆಗೆದುಕೊಂಡು ಮುಕ್ತ ಮತದಾನ ನಡೆಯಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಬಡವರು, ಮುಗ್ದರಿಗೆ ವಿವಿಧ ರೀತಿಯಲ್ಲಿ ಆಮಿಷವೊಡ್ಡಿ ಅವರ ಮತವನ್ನು ಖರೀದಿ ಮಾಡಿ ಚುನಾವಣೆಯಲ್ಲಿ ಗೆಲ್ಲುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡುವ ದ್ರೋಹ. ಇಂತಹ ಚುನಾವಣಾ ಅಕ್ರಮಗಳಿಗೆ ಕಡಿವಾಣ ಬೀಳಬೇಕು. ಮತದಾರರೂ ಕೂಡಾ ತಮ್ಮ ಮತದ ಮೌಲ್ಯ ಅರಿತು, ಮತ ಮಾರಿಕೊಳ್ಳದಂತೆ ಎಚ್ಚರ ವಹಿಸಬೇಕು ಎಂದು ಹೇಳಿದರು.
ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷ ಅಂಜನಮೂರ್ತಿ ಮಾತನಾಡಿ, ಇದೂವರೆಗೆ ಅಧಿಕಾರ ನಡೆಸಿರುವ ರಾಜಕೀಯ ಪಕ್ಷಗಳ ಬಗ್ಗೆ ಜನ ಬೇಸತ್ತಿದ್ದಾರೆ. ಹಿಂದುಳಿದ, ಶೋಷಿತ, ಬಡವರ ಪರವಾಗಿರುವ ಬಹುಜನ ಸಮಾಜವಾದ ಪಕ್ಷದ ಚಿಂತನೆ, ತತ್ವ ಸಿದ್ದಾಂತಗಳನ್ನು ಜನರಿಗೆ ತಿಳಿಸಿ ಅವರು ಪಕ್ಷವನ್ನು ಬೆಂಬಲಿಸಲು ಮನವರಿಕೆ ಮಾಡಬೇಕು ಮನವಿ ಮಾಡಿದರು.
ಬಿಎಸ್‌ಪಿ ಪಕ್ಷವನ್ನು ಜಿಲ್ಲೆಯಲ್ಲಿ ಸದೃಢವಾಗಿ ಸಂಘಟನೆ ಮಾಡಲು ಹೆಚ್ಚು ಜನರನ್ನು ಪಕ್ಷದ ಸದಸ್ಯರನ್ನಾಗಿ ನೋಂದಾಯಿಸಬೇಕು. ಹಿಂದುಳಿದ ಸಮುದಾಯಗಳಿಗೆ ಹೆಚ್ಚು ಪ್ರಾತಿನಿಧ್ಯ ನೀಡಿಕೊಂಡು ಬರುತ್ತಿರುವ ನಮ್ಮ ಪಕ್ಷದ ಆಶಯಗಳನ್ನು ಮನೆಮನೆಗೆ ತಲುಪಿಸಿ ಮುಂಬರುವ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷವನ್ನು ಅಧಿಕಾರಕ್ಕೆ ತರಲು ಕಾರ್ಯಕರ್ತರು ಶ್ರಮಿಸಬೇಕು ಎಂದರು.
ಪಕ್ಷದ ರಾಜ್ಯ ಸಂಯೋಜಕ ಹಾಗೂ ರಾಜ್ಯ ಉಸ್ತುವಾರಿ ದಿನೇಶ್ ಗೌತಮ್, ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ಹನುಮಂತರಾಯ, ಕಾರ್ಯದರ್ಶಿ ಶೂಲಯ್ಯ, ಮುಖಂಡ ರುದ್ರಪ್ಪ, ಜಿಲ್ಲಾ ಉಸ್ತುವಾರಿ ಹನುಮಂತರಾಯ, ಜಿಲ್ಲಾ ಉಪಾಧ್ಯಕ್ಷ ಮಂಜುಳಾ, ಕೊತ್ತೂರು ರಾಮಾಂಜಿ, ಪ್ರಧಾನ ಕಾರ್ಯದರ್ಶಿ ಸುಧಾಕರ್, ಕೊರಟಗೆರೆ ತಾಲ್ಲೂಕು ಅಧ್ಯಕ್ಷ ಮಂಜುನಾಥ್, ಮುಖಂಡ ದಿಲೀಪ್ ಇದ್ದರು.


