ಬೆಳೆ ಹಾನಿಯಾದ ರೈತರಿಗೆ ಪರಿಹಾ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಷ್ಟ್ರ ಸಮಿತಿ ಕಾರ್ಯಕರ್ತರು ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದ ತಾಲೂಕು ಕಚೇರಿಯ ಮುಂಭಾಗ ಚನ್ನತಿಮ್ಮನಪಾಳ್ಯ ಗ್ರಾಮದ ರೈತರೊಂದಿಗೆ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕೆಆರ್ ಎಸ್ ಪಕ್ಷದ ಮುಖಂಡ ರಘು ಜಾಣಗೆರೆ, ಕುಣಿಗಲ್ ತಾಲೂಕಿನ ಚನ್ನತಿಮ್ಮನಪಾಳ್ಯ ಗ್ರಾಮದಲ್ಲಿ ಕಳೆದ ಮೂರು ವರ್ಷಗಳಿಂದ ಸುಮಾರು 40 ರಿಂದ 50 ಎಕರೆ ಪ್ರದೇಶ ಭೂಮಿಯಲ್ಲಿ ಬೆಳೆಯಲಾಗಿರುವ ತೆಂಗು, ಅಡಿಕೆ, ರಾಗಿ, ಇತರೆ ಬೆಳೆಗಳು ಸಂಪೂರ್ಣ ನಾಶವಾಗಿದೆ. ಇದಕ್ಕೆ ಪರಿಹಾರ ನೀಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಮೂರು ವರ್ಷಗಳಿಂದ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜನರ ಸಮಸ್ಯೆಗೆ ಸ್ಪಂದಿಸದಿದ್ದಾಗ ತಾಲೂಕು ಕಚೇರಿಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಕಾರಣ ತಹಶೀಲ್ದಾರ್ ರಶ್ಮಿ ಅವರು ಕರ್ತವ್ಯಕ್ಕೆ ಅಡ್ಡಿಪಡಿಸಿದರು ಎಂದು ರೈತರನ್ನು ಕಳೆದ ಎರಡು ದಿನಗಳ ಹಿಂದೆ ಪೊಲಿಸರ ವಶಕ್ಕೆ ಒಪ್ಪಿಸಿರುವುದು ಖಂಡನೀಯ. ಈ ಕೂಡಲೇ ತಹಶೀಲ್ದಾರ್ ರಶ್ಮಿ ಸ್ಥಳಕ್ಕೆ ಬರುವಂತೆ ಒತ್ತಾಯಿಸಿದರು.
ತಹಶಿಲ್ದಾರ್ ಸ್ಥಳಕ್ಕೆ ಆಗಮಿಸಿದಾಗ ಕೆ.ಆರ್.ಎಸ್ ಪಕ್ಷದ ಮುಖಂಡ ರಘು ಜಾಣಗೆರೆ ತರಾಟೆಗೆ ತೆಗೆದುಕೊಂಡ ಪ್ರಸಂಗ ಜರುಗಿತು, ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು, ತಹಶೀಲ್ದಾರ್ ಅವರಿಗೆ ಅಸಂವಿಧಾನಾತ್ಮಕ ಪದವನ್ನು ಬಳಸಿ ಮಾತನಾಡದಂತೆ ರಘು ಜಾಣಗೆರೆ ತಾಕೀತು ಮಾಡಿದರು. ಎರಡು ದಿನಗಳ ಹಿಂದೆ ತಾಲೂಕು ಕಚೇರಿಗೆ ಚನ್ನತಿಮ್ಮನಪಾಳ್ಯ ಗ್ರಾಮದ ರೈತರು ಆಗಮಿಸಿ, ತಮಗಾಗಿರುವ ಬೆಳೆ ನಷ್ಟದ ಪರಿಹಾರದ ಬಗ್ಗೆ ಕೇಳುವ ವೇಳೆ ಮಾತಿನ ಚಕಮಕಿ ನಡೆದು ಅವರನ್ನು ಪೊಲೀಸ್ ಠಾಣೆಯಲ್ಲಿ ಕೂರಿಸಿರುವುದು ಅಕ್ಷಮ್ಯ ಅಪರಾಧ. ತಿಳುವಳಿಕೆ ಇಲ್ಲದ ರೈತರೊಂದಿಗೆ ಈ ರೀತಿಯ ದುರ್ವರ್ತನೆ ತೋರಿರುವುದು ಸರಿಯಲ್ಲ ಎಂದು ಕೋಪ ವ್ಯಕ್ತಪಡಿಸಿದರು.
ಹೇಮಾವತಿ ನಾಲಾ ವಿಭಾಗದ ಅಧಿಕಾರಿಗಳ ನಿರ್ಲಕ್ಷದಿಂದಾಗಿ ನೀರು ತುಂಬಿ ಬೆಳೆದ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ರೈತರು ಹೊಟ್ಟೆಗೆ ಏನನ್ನು ತಿನ್ನಬೇಕು. ನಿಮಗಾದರೂ ಸಂಬಳ ಬರುತ್ತದೆ. ರೈತರ ಸಮಸ್ಯೆ ಸರಿಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಬದಲು ಅವರ ಮೇಲೆ ದೌರ್ಜನ್ಯ ನಡೆಸುವುದು ಎಷ್ಟು ಸರಿ ಎಂದು ತಹಶೀಲ್ದಾರ್ ಹಾಗೂ ಹೇಮಾವತಿ ನಾಲಾ ಅಧಿಕಾರಿ ರವಿ ಅವರನ್ನು ತರಾಟಗೆ ತೆಗೆದುಕೊಂಡರು.
ತಹಶೀಲ್ದಾರ್ ರಶ್ಮಿ ಮಾತನಾಡಿ, ನಮಗೆ ಪರಿಹಾರ ನೀಡುವ ಅಧಿಕಾರವಿಲ್ಲ, ಹೇಮಾವತಿ, ಕೃಷಿ, ಇಲಾಖೆ ತೋಟಗಾರಿಕೆ ಇಲಾಖೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಪರಿಹಾರಕ್ಕಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು.
ರೈತರು ಪ್ರತಿ ಎಕರೆಗೆ 15 ಕ್ವಿಂಟಲ್ ರಾಗಿ ಬೆಳೆಯುತ್ತಿದ್ದು, ಮೂರು ವರ್ಷಗಳಿಂದ ನಷ್ಟವಾಗಿರುವುದರಿಂದ ಸರ್ಕಾರದ ಬೆಂಬಲ ಬೆಲೆಯಂತೆ ಬೆಳೆ ನಷ್ಟದ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು. ಕೆ.ಆರ್.ಎಸ್ ಪಕ್ಷದ ಎಸ್‌ಸಿ-ಎಸ್‌ಟಿ ಘಟಕದ ರಾಜ್ಯ ಕಾರ್ಯದರ್ಶಿ ಚೆನ್ನಯ್ಯ, ಜಿಲ್ಲಾಧ್ಯಕ್ಷ ಶ್ರೀನಿವಾಸ್, ಮಂಜು, ವಿಜಯ್, ಹೊನ್ನಪ್ಪ, ಶ್ರೀನಿವಾಸ್‌ಮೂರ್ತಿ, ಭಾರತಿ ಇದ್ದರು.


