ತುಮಕೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳಲ್ಲಿನ 150 ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಶಿವಮೊಗ್ಗ, ಹಂಪಿ ವಿಶ್ವವಿದ್ಯಾಲಯ ಸೇರಿ ಬೇರೆ ವಿವಿಯ ಅತಿಥಿ ಉಪನ್ಯಾಸಕರಿಂದ ಸ್ವಹಿತಾಸಕ್ತಿ, ಸ್ವಜನ ಪಕ್ಷಪಾತ, ಭ್ರಷ್ಟ ರಾಜಕೀಯ ಮತ್ತು ಲಂಚ ಪಡೆದುಕೊಂಡು ನೇಮಕ ಮಾಡಿ ಪ್ರಸ್ತುತ ವಿವಿಯಲ್ಲಿರುವ ಅತಿಥಿ ಉಪನ್ಯಾಸಕರನ್ನು ತೆಗೆದುಹಾಕಲಾಗಿದೆ. ಹತ್ತಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಕೈಬಿಟ್ಟು ಲಂಚ ಪಡೆದೇ ಬೇರೆ ಕಡೆಯವರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಉಪಾಧ್ಯಕ್ಷ ಜ್ಞಾನ ಸಿಂಧೂ ಸ್ವಾಮಿ ಆರೋಪಿಸಿದ್ದಾರೆ.
ಪ್ರಸ್ತುತ ಉಪನ್ಯಾಸಕರನ್ನು ಇದ್ದಕ್ಕಿದ್ದಂತೆ ಕೆಲಸದಿಂದ ತೆಗೆದು ಅವರ ಬದುಕನ್ನು ವಿಶ್ವವಿದ್ಯಾಲಯದ ಕುಲಪತಿ, ಕುಲಸಚಿವರು ಅತಂತ್ರಗೊಳಿಸಿದ್ದಾರೆ. ಇಷ್ಟು ವರ್ಷಗಳ ಕಾಲ ಸೇವೆ ಸಲ್ಲಿಸಿ ವಯೋಮಿತಿ ಮೀರಿದವರನ್ನೂ ಸೇರಿ ಎಲ್ಲರನ್ನೂ ವಿಶ್ವವಿದ್ಯಾಲಯ ಆಚೆ ಇಟ್ಟರೆ, ಅವರು ಎಲ್ಲಿ ಕೆಲಸ ಹುಡುಕಿಕೊಂಡು ಹೋಗಬೇಕು?, ಇದು ಕೇವಲ ಹುದ್ದೆಯ ಪ್ರಶ್ನೆ ಅಲ್ಲ. ಇದು ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಜೀವನದ ಪ್ರಶ್ನೆ. ತುಮಕೂರು ವಿಶ್ವವಿದ್ಯಾಲಯದಲ್ಲಿ ಪ್ರಸ್ತುತ ಇರುವವರನ್ನ ಕೈಬಿಟ್ಟು ಸ್ಥಳೀಯರಿಗೆ ಆದ್ಯತೆ ನೀಡದೆ ಬೇರೆ ಬೇರೆ ವಿಶ್ವವಿದ್ಯಾಲಯ ಮತ್ತು ಬೇರೆ ಬೇರೆ ಜಿಲ್ಲೆಗಳಿಂದ ನೇಮಕ ಮಾಡಿಕೊಳ್ಳುತ್ತಿರುವ ಬಗ್ಗೆ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು ಚಿಂತಿಸದೇ ಇರುವುದನ್ನು ನೋಡಿದರೆ ಭಾರಿ ಅವ್ಯವಹಾರ ನೆಡೆದಿರುವುದು ಮೇಲ್ನೋಟಕ್ಕೆ ಸಾಬೀತು ಆಗುತ್ತದೆ ಎಂದು ಆರೋಪಿಸಿದರು.
ತುಮಕೂರು ಜಿಲ್ಲೆಯ ಅತಿಥಿ ಉಪನ್ಯಾಸಕರು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಬಳಿ ಅಸಮಾಧಾನ ವ್ಯಕ್ತಪಡಿಸಿದ್ದು, ನಮ್ಮ ಜೀವನವನ್ನು ವಿಶ್ವವಿದ್ಯಾಲಯದ ಕೆಲವೇ ಕೆಲವರು ಹಾಳು ಮಾಡುತ್ತಿದ್ದಾರೆ. ಇದ್ದಕ್ಕಿದ್ದಂತೆ ನಮ್ಮನ್ನ ಆಚೆ ಹಾಕಿದರೆ ನಾವು ಕುಟುಂಬ ಸಾಕುವುದು ಹೇಗೆ? ಜೀವನ ನಿರ್ವಹಣೆ ಮಾಡುವುದು ಹೇಗೆ? ವಿಶ್ವವಿದ್ಯಾಲಯವನ್ನೇ ನಂಬಿಕೊಂಡು ನಮ್ಮ ಕರ್ತವ್ಯವನ್ನು ನಾವು ಮಾಡಿಕೊಂಡು ಬರುತ್ತಿದ್ದೇವೆ. ಆದರೆ ಬೇರೆ ಕಡೆಯಿಂದ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳುವ ತುರ್ತು ಏನಿತ್ತು?. ತುಮಕೂರು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಅತಿಥಿ ಉಪನ್ಯಾಸಕರೇ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಇದು ಸ್ಥಳೀಯರನ್ನ ತುಳಿಯುವ ಕುತಂತ್ರ ನಡೆಯಾಗಿದ್ದು, ಈ ಕೂಡಲೇ ಈಗಿರುವ ಅತಿಥಿ ಉಪನ್ಯಾಸಕರಿಗೆ ನ್ಯಾಯ ಕೊಡಿಸಬೇಕು. ಇಲ್ಲದಿದ್ದರೆ ವಿವಿಯ ಪ್ರಮುಖರ ವಿರುದ್ಧ ಉನ್ನತ ಶಿಕ್ಷಣ ಸಚಿವರು, ಸರ್ಕಾರ ಮತ್ತು ರಾಜ್ಯಪಾಲರಿಗೆ ದೂರು ನೀಡಲಾಗುತ್ತದೆ. ಸರ್ಕಾರ ಮತ್ತು ವಿವಿಯ ಆಡಳಿತ ಎಚ್ಚರಗೊಂಡು ಎರಡು ವಾರದೊಳಗೆ ಈ ಸಮಸ್ಯೆ ಬಗೆಹರಿಸದೆ ಇದ್ದರೆ, ಅತಿಥಿ ಉಪನ್ಯಾಸಕರ ಜೀವನ ನಾಶ ಮಾಡಿರುವುದಕ್ಕೆ ವಿಶ್ವವಿದ್ಯಾಲಯದ ಮುಂಭಾಗ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಮತ್ತು ಅತಿಥಿ ಉಪನ್ಯಾಸಕರ ಕುಟುಂಬದವರು ವಿಶ್ವವಿದ್ಯಾಲಯದ ತಿಥಿ ಮಾಡಿ ಅಡುಗೆ ಮಾಡಿ ಸಾರ್ವಜನಿಕರಿಗೆ ಬಡಿಸಿ ಅನ್ನ ಸಂತರ್ಪಣೆ ಮಾಡಿ ವಿಶ್ವವಿದ್ಯಾಲಯದ ಪ್ರಮುಖರಿಗೆ ಸನ್ಮಾನ ಮಾಡಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಲಂಚದ ಮುಂದೆ ಮರೆಯಾದ ಮಾನವೀಯತೆ
ಇಷ್ಟು ವರ್ಷಗಳ ಕಾಲ ತುಮಕೂರು ವಿಶ್ವವಿದ್ಯಾಲಯದಲ್ಲಿ ಮಕ್ಕಳಿಗೆ ಅನ್ಯಾಯವಾಗದ ರೀತಿಯಲ್ಲಿ ಉಪನ್ಯಾಸ ನೀಡಿ, ಕೊಡುವ ಸಂಬಳದಲ್ಲಿ ಅನುಸರಿಸಿಕೊಂಡು ಜೀವನ ಮಾಡುತ್ತಿರುವ ಅತಿಥಿ ಉಪನ್ಯಾಸಕರನ್ನು ಕೈಬಿಟ್ಟು ಈಗ ಹೊಸದಾಗಿ ನೇಮಕವಾಗುವ ಅತಿಥಿ ಉಪನ್ಯಾಸಕರಿಂದ ಲಂಚ ಪಡೆದು ನೇಮಕ ಮಾಡಿಕೊಂಡರೆ ಇದು ಮಾನವೀಯತೆಗೆ ಮತ್ತು ವಿಶ್ವವಿದ್ಯಾಲಯ ಕಾನೂನಿಗೆ ವಿರುದ್ಧವಾಗಿದೆ. ಸಂಬAಧಪಟ್ಟ ಹಿರಿಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇತ್ತ ಗಮನಹರಿಸಿ ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲರಿಗೂ ನ್ಯಾಯ ದೊರಕಿಸಬೇಕು. ಬೇರೆ ಬೇರೆ ಕ್ಷೇತ್ರದಿಂದ ಬಂದAತಹ ಸಿಂಡಿಕೇಟ್ ಸಭೆಯ ಸದಸ್ಯರು ಸಹ ಇದೇ ಜಿಲ್ಲೆಯವರಾಗಿದ್ದು, ಅವರು ಜಿಲ್ಲೆಯ ಉಪನ್ಯಾಸಕರಿಗೆ ಮೊದಲ ಆದ್ಯತೆ ನೀಡಿ ವಿಶ್ವವಿದ್ಯಾಲಯದ ಗೌರವಕ್ಕೆ ಪಾತ್ರರಾಗಬೇಕಿದೆ.


