ಕೆ.ಎನ್.ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿದ ಕಾಂಗ್ರೆಸ್ ಹೈಕಮಾಂಡ್ ಕ್ರಮವನ್ನು ಖಂಡಿಸಿ ಕೆಎನ್ಆರ್ ಅಭಿಮಾನಿಗಳು ತುಮಕೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ರಾಜಣ್ಣ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಕೆ.ಎನ್.ಆರ್, ಆರ್.ಆರ್. ಅಭಿಮಾನಿ ಬಳಗ, ಕಾಂಗ್ರೆಸ್ ಮುಖಂಡರು, ಹಿಂದುಳಿದ ವರ್ಗಗಳ ಒಕ್ಕೂಟ, ದಲಿತ ಸಂಘರ್ಷ ಸಮಿತಿ, ಅಲ್ಪಸಂಖ್ಯಾತ ಸಮುದಾಯ ಸೇರಿದಂತೆ ವಿವಿಧ ಸಮಾಜಗಳ ಮುಖಂಡರು ನಗರದ ಟೌನ್‌ಹಾಲ್ ವೃತ್ತದಲ್ಲಿ ಜಮಾಯಿಸಿ ಮಹಾನಗರ ಪಾಲಿಕೆ ಆವರಣದಲ್ಲಿರುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಯಾವುದೇ ತಪ್ಪು ಮಾಡದ ಕೆ.ಎನ್.ರಾಜಣ್ಣನವರನ್ನು ಸಂಪುಟದಿಂದ ವಜಾ ಮಾಡಿ ಅಪಮಾನ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಟೌನ್‌ಹಾಲ್ ವೃತ್ತದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ ಕೆಎನ್‌ಆರ್ ಅಭಿಮಾನಿಗಳು, ಮಧುಗಿರಿ ಕ್ಷೇತ್ರದ ಕಾರ್ಯಕರ್ತರು ಕೆಎನ್‌ಆರ್ ಪರ ಘೋಷಣೆಗಳನ್ನು ಕೂಗುತ್ತಾ ಬಿ.ಹೆಚ್. ರಸ್ತೆ ಮುಖೇನ ಎಂ.ಜಿ. ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆಯಲ್ಲಿ ಸಾಗಿ ಜಿಲ್ಲಾಧಿಕಾರಿಗಳ ಕಚೇರಿ ತಲುಪಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಮುಖಂಡ ಗಂಗಣ್ಣ ಮಾತನಾಡಿ, ಕೆ.ಎನ್. ರಾಜಣ್ಣ ಅವರನ್ನು ಸಂಪುಟದಿಂದ ವಜಾ ಮಾಡಿರುವುದು ತುಮಕೂರು ಜಿಲ್ಲೆಯ ಅಹಿಂದ ವರ್ಗದವರಿಗೆ ತುಂಬಾ ನೋವಾಗಿದೆ. ಮತ್ತೆ ರಾಜಣ್ಣನವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕು. ಈ ಕೆಲಸ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ದುರ್ಬಲವಾಗುತ್ತದೆ. ಇದಕ್ಕೆ ಅವಕಾಶ ನೀಡದೆ ಕಾಂಗ್ರೆಸ್ ಹೈಕಮಾಂಡ್, ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ರಾಜಣ್ಣನವರನ್ನು ವಜಾ ಮಾಡಿರುವುದನ್ನು ವಾಪಸ್ ಪಡೆದು ಮತ್ತೆ ಮಂತ್ರಿ ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕಲ್ಲಹಳ್ಳಿ ದೇವರಾಜು, ಸಿಂಗನಹಳ್ಳಿ ರಾಜ್‌ಕುಮಾರ್, ವೆಂಕಟೇಗೌಡ, ಧನಿಯಕುಮಾರ್, ಪ್ರತಾಪ್ ಮದಕರಿ, ಪುರುಷೋತ್ತಮ್, ಟಿ.ಪಿ. ಮಂಜುನಾಥ್, ಲಕ್ಷ್ಮಿನಾರಾಯಣ್, ಕುಂದೂರು ತಿಮ್ಮಯ್ಯ, ಮಂಜೇಶ್, ಕುಪ್ಪೂರು ಶ್ರೀಧರ್, ಮುರುಳಿ ಕುಂದೂರು, ತಿಮ್ಮಣ್ಣ ಕುಂದೂರು, ಮಂಜುನಾಥ್, ನಾರಾಯಣಗೌಡ, ರಾಯಸಂದ್ರ ರವಿಕುಮಾರ್ ಭಾಗವಹಿಸಿದ್ದರು.


