ಗಣಿಭಾದಿತ ಪ್ರದೇಶಗಳ ಅಭಿವೃದ್ದಿಗೆಂದು ಮೀಸಲಿಟ್ಟಿರುವ ಹಣವನ್ನು ಬಾಧಿತ ಪ್ರದೇಶಗಳ ಶಿಕ್ಷಣ, ಆರೋಗ್ಯ ಮತ್ತು ಅರ್ಥಿಕ ಅಭಿವೃದ್ದಿಗೆ ಬಳಸುವಂತೆ ಸರಕಾರದ ಮೇಲೆ ನಿಗಾವಹಿಸುವುದು, ಹೊಸ ಗಣಿಗಾರಿಕೆಗೆ ಅನುಮತಿ ನೀಡದಂತೆ ಸರಕಾರದ ಮೇಲೆ ಒತ್ತಡ ತರುವುದು ಹಾಗೂ ಸೆಸ್ ಹಣ ಅನ್ಯ ಉದ್ದೇಶಗಳೀಗೆ ಬಳಕೆಯಾಗುವುದನ್ನು ತಡೆಯುವ ಉದ್ದೇಶದಿಂದ ಬಾಧಿತ ಪ್ರದೇಶಗಳಲ್ಲಿ ಜಾಗೃತಿ ಮೂಡಿಸಲು ಆಗಸ್ಟ್ 16 ರಂದು ಬಳ್ಳಾರಿಯಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಜನಾಂದೋಲನ ಮಹಾಮೈತ್ರಿಯ ಎಸ್.ಆರ್.ಹಿರೇಮಠ್ ತಿಳಿಸಿದ್ದಾರೆ.
ತುಮಕೂರು ನಗರದ ವಿಜ್ಞಾನ ಕೇಂದ್ರದಲ್ಲಿ ಜನಾಂದೋಲನ ಮಹಾಮೈತ್ರಿ ವತಿಯಿಂದ ಆಗಸ್ಟ್ 16 ರಂದು ಹಮ್ಮಿಕೊಂಡಿರುವ ಗಣಿ ಭಾದಿತ ಪ್ರದೇಶಗಳ ಪುನಶ್ಚೇತನ ಸಮಾಲೋಚನ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗಣಿ ಬಾಧಿತ ಪ್ರದೇಶಗಳ ಅಭಿವೃದ್ದಿ ನಿಗಮದಲ್ಲಿ ಸುಮಾರು 30 ಸಾವಿರ ಕೋಟಿ ಹಣವಿದೆ. ಇದನ್ನು ಬೇರೆ ಬೇರೆ ಉದ್ದೇಶಗಳಿಗೆ ಬಳಸಿಕೊಳ್ಳಲು ಕೇಂದ್ರದ ಕೈಗಾರಿಕಾ ಮಂತ್ರಿಗಳು ಸೇರಿದಂತೆ ಹಲವು ತುದಿಗಾಲಲ್ಲಿ ಕಾಯುತಿದ್ದಾರೆ. ಆದರೆ ಇದಕ್ಕೆ ಸುಪ್ರಿಂಕೋರ್ಟು ಅವಕಾಶ ಮಾಡಿಕೊಟ್ಟಿಲ್ಲ. ಬಾಧಿತ ಪ್ರದೇಶಗಳ ಜನರ ಶೈಕ್ಷಣಿಕ, ಆರೋಗ್ಯ ಮತ್ತು ಅದಾಯ ವೃದ್ದಿಗೆ ಈ ಹಣ ಸದುಪಯೋಗವಾಗಬೇಕು ಎಂಬುದು ನಮ್ಮೆಲ್ಲರ ಆಶಯವಾಗಿದೆ. ಇಂತಹ ಸಮಾಲೋಚನಾ ಸಭೆಗಳ ಮೂಲಕ ಗಣಿ ಬಾಧಿತ ಪ್ರದೇಶಗಳ ಪುನಶ್ಚೇತನಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ರೈತರು, ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿಗಳು, ಹೋರಾಟಗಾರರಿಂದ ಮಾಹಿತಿ ಸಂಗ್ರಹಿಸಿ, ನಿಗಮದ ಅಧ್ಯಕ್ಷರಿಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಅಕ್ರಮ ಮತ್ತು ಸಕ್ರಮ ಎರಡು ಗಣಿಗಾರಿಕೆಯಿಂದ ಇಡೀ ಪರಿಸರ ಹಾಳಾಗಿದೆ. ಹಾಗಾಗಿ ಹೊಸ ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂಬುದು ನಮ್ಮ ಆಗ್ರಹವಾಗಿದೆ. ನಮ್ಮ ಒತ್ತಾಯದ ಮೇರೆಗೆ ತೀರ ಅಗತ್ಯವೆನಿಸಿದಾಗ ಒಂದು ಪ್ರದೇಶದಲ್ಲಿ 20 ಮಿಲಿಯನ್ ಮೆಟ್ರಿಕ್ ಟನ್ ಅದಿರು ತೆಗೆಯಲು ಮಾತ್ರ ಸುಪ್ರಿಂಕೋರ್ಟು ಅವಕಾಶ ಕಲ್ಪಿಸಿದೆ. ಇದರಲ್ಲಿ ಯಾವುದೇ ಆಕ್ರಮವಾಗದಂತೆ ಹೋರಾಟಗಾರರು ಎಚ್ಚರಿಕೆ ವಹಿಸಬೇಕಾಗಿದೆ. ಪ್ರಜಾಸತ್ತಾತ್ಮಕ ರೀತಿಯಲ್ಲಿಯೇ ನಮ್ಮ ಮುಂದಿರುವ ಅಂಬೇಡ್ಕರ್ ಅವರ ಮಾವಾಡ್ ಕೆರೆ ನೀರು ಹೋರಾಟ, ಗಾಂಧಿಯ ಉಪ್ಪಿನ ಸತ್ಯಾಗ್ರಹ, ದೆಹಲಿ ರೈತರ ಐಕ್ಯ ಹೋರಾಟದ ರೀತಿ ಹೋರಾಟಗಳನ್ನು ನಡೆಸಿ, ಮುಂದಿನ ಪೀಳಿಗೆಗೆ ಒಳ್ಳೆಯ ಪರಿಸರವನ್ನು ನೀಡೋಣ. ಹಮ್ ಲಡೇಂಗೆ, ಹಮ್ಮ್ ಜೀತೇಂಗೆ ಎಂಬುದು ನಮ್ಮ ಗುರಿಯಾಗಬೇಕು ಎಂದರು.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ, ಪರಿಸರವಿದ್ದರೆ ನಾವು, ಗಣಿಯಿಂದಾಗಿ ಪರಿಸರದ ಮೇಲಾದ ದುಷ್ಪರಿಣಾಮದಿಂದ ಹವಾಮಾನ ವೈಪರಿತ್ಯ ಉಂಟಾಗಿ ಜನರು ವಿವಿಧ ರೀತಿಯ ತೊಂದರೆ ಅನುಭವಿಸುತಿದ್ದಾರೆ. ಜೊತೆಗೆ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದನ್ನು ತೆಡೆಯುವ ನಿಟ್ಟಿನಲ್ಲಿ ಆಗಸ್ಟ್ 16 ರಂದು ಬಳ್ಳಾರಿಯಲ್ಲಿ ನಡೆಯುವ ಸಮಾವೇಶದಲ್ಲಿ ನಾವೆಲ್ಲರೂ ಪಾಲ್ಗೊಳ್ಳೋಣ ಎಂದು ಕರೆ ನೀಡಿದರು.
ಜನಾಂದೋಲನ ಮಹಾಮೈತ್ರಿಯ ಜಿಲ್ಲಾಧ್ಯಕ್ಷ ಪಂಡಿತ್ ಜವಾಹರ್ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪರಿಸರವಾದಿ ಸಿ.ಯತಿರಾಜು, ಮಹಾ ಮೈತ್ರಿಯ ಕೆ.ವಿ.ಭಟ್, ಕೃಷಿ ವಿಜ್ಞಾನಿ ಡಾ.ಮಂಜುನಾಥ್, ರೈತರಾದ ರವೀಶ್, ಚಿಕ್ಕಬೋರೇಗೌಡ ಅನಿಸಿಕೆ ವ್ಯಕ್ತಪಡಿಸಿದರು.


