ಕಳೆದ ಕೆಲವು ದಿನಗಳಿಂದ ರಾಜ್ಯ ಬಿಜೆಪಿಯಲ್ಲಿ ಕಾಣಿಸಿಕೊಂಡಿರುವ ಭಿನ್ನಮತ ಇದೀಗ ಮತ್ತೊಮ್ಮೆ ತೀವ್ರ ಸ್ವರೂಪ ಪಡೆದುಕೊಂಡಿದೆ.
ಪಕ್ಷದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಿರುದ್ಧ ಬಂಡಾಯದ ಬಾವುಟ ಹಾರಿಸಿರುವ ಭಿನ್ನಮತಿಯ ನಾಯಕರ ಉಚ್ಚಾಟನೆಗೆ ಪಟ್ಟು ಹಿಡಿದಿರುವ ವಿಜಯೇಂದ್ರ ಆಪ್ತಬಣದ ನಾಯಕರು ವರಿಷ್ಠರನ್ನು ಭೇಟಿ ಮಾಡಿ ದೂರು ಸಲ್ಲಿಸಿದ್ದಾರೆ.
ಮಾಜಿ ಮಂತ್ರಿಗಳಾದ ಅರವಿಂದ ಲಿಂಬಾವಳಿ, ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಶಾಸಕ ಬಿಪಿ ಹರೀಶ್, ಮಾಜಿ ಸಂಸದ ಜಿಎಂ ಸಿದ್ದೇಶ್ವರ್, ಪ್ರತಾಪ್ ಸಿಂಹ ಅವರು ಹೈಕಮಾಂಡ್ ಸೂಚನೆಯ ನಂತರವೂ ಪಕ್ಷದ ನಾಯಕತ್ವದ ವಿರುದ್ಧ ಮಾತನಾಡುವ ಮೂಲಕ ಗೊಂದಲ ಮೂಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಮಾಜಿ ಮಂತ್ರಿ ರೇಣುಕಾಚಾರ್ಯ ನೇತೃತ್ವದಲ್ಲಿ ವಿಜಯೇಂದ್ರ ಅವರ ಆಪ್ತ ಬಣದ ನಾಯಕರು ದೆಹಲಿಗೆ ತೆರಳಿ ಪಕ್ಷದ ರಾಷ್ಟ್ರೀಯ ಶಿಸ್ತು ಸಮಿತಿ ಅಧ್ಯಕ್ಷ ಓಂ ಪಾಠಕ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭೇಟಿಯಾಗಿ ದೂರು ಸಲ್ಲಿಸಿದ್ದಾರೆ.
ಬೆಳಗಾವಿ ಗೋಕಾಕ್ ನಲ್ಲಿ ನಡೆದ ಜಾತ್ರೆಯ ನೆಪದಲ್ಲಿ ಎಲ್ಲ ಭಿನ್ನಮತಿಯರು ಸಭೆ ಸೇರಿ ವಿಜಯೇಂದ್ರ ವಿರುದ್ಧ ಸಂಚುರೂಪಿಸಿದ್ದಾರೆ. ಆನಂತರ ದಾವಣಗೆರೆಯಲ್ಲಿ ಮಾಜಿ ಸಂಸದ ಜಿ.ಎಂ ಸಿದ್ದೇಶ್ವರ್ ಹುಟ್ಟು ನೆಪದಲ್ಲಿ ಬಂದ ಅರವಿಂದ್ ಲಿಂಬಾವಳಿ, ಪ್ರತಾಪ್ ಸಿಂಹ ಪಕ್ಷದ ನಾಯಕತ್ವದ ವಿರುದ್ಧ ಮಾತನಾಡಿದ್ದಾರೆ.ಗೋಕಾಕ್ ಜಾತ್ರೆಯಲ್ಲಿ ಕುಮಾರ್ ಬಂಗಾರಪ್ಪ ನಾಯಕತ್ವದ ವಿರುದ್ಧ ಮಾತನಾಡಿದ್ದಾರೆ.
ಇದೀಗ ಬಾಂಗ್ಲಾ ನಿವಾಸಿಗಳ ಅಕ್ರಮ ವಾಸದ ವಿರುದ್ಧ ಆಂದೋಲನ ಹೆಸರಿನಲ್ಲಿ ಹೋರಾಟ ನಡೆಸುತ್ತಿದ್ದು ಇದರಲ್ಲೂ ಬಿಜೆಪಿ ನಾಯಕತ್ವದ ವಿರುದ್ಧವೇ ಮಾತನಾಡುತ್ತಿದ್ದಾರೆ. ಅನಗತ್ಯ ಗೊಂದಲ ಸೃಷ್ಟಿಸುವುದೇ ಇವರ ಕಾಯಕವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಮಾಜಿ ಸಚಿವ ಅರವಿಂದ್ ಲಿಂಬಾವಳಿ ಅವರು ಪಕ್ಷದ ಕಚೇರಿಯನ್ನು ಕಟ್ಟಿದ್ದು ನಾನೇ, ಪಕ್ಷ ಬಿಟ್ಟು ಹೋದ ಬಿ.ಎಸ್.ಯಡಿಯೂರಪ್ಪ ಅವರು ಮತ್ಯಾಕೆ ಬಂದರೋ ಗೊತ್ತಿಲ್ಲ ಎನ್ನುತ್ತಾರೆ. ಜಿ.ಎಂ ಸಿದ್ದೇಶ್ವರ್ ಮಾತನಾಡಿ, ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯಾಗಲು ಕಾರಣ ನಾನು ಎನ್ನುತ್ತಾರೆ. ಅವರ ಸೋಲಿಗೆ ದಾವಣಗೆರೆ ಜಿಲ್ಲಾ ನಾಯಕರು ಎಂದು ಆರೋಪಿಸಿದ್ದಾರೆ. ಇಂತಹ ಗೊಂದಲ ಮೂಡಿಸುತ್ತಿರುವ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ಪಕ್ಷದಲ್ಲಿ ಶಿಸ್ತು ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ.


