ಕೇಂದ್ರ ಸರಕಾರ ಜಾರಿಗೆ ತಂದಿರುವ ವಕ್ಫ್ ತಿದ್ದುಪಡಿ ಕಾಯ್ದೆ-2025ನ್ನು ವಿರೋಧಿಸಿ, ಮಸೂದೆಯನ್ನು ಹಿಂಪಡೆಯುವಂತೆ ಆಗ್ರಹಿಸಿ ತುಮಕೂರು ನಗರದ ಬಾರ್‌ಲೈನ್ ರಸ್ತೆಯಲ್ಲಿರುವ ಮೆಕ್ಕಾ ಮಸೀದಿ ಆವರಣದಲ್ಲಿ ಮಾನವ ಸರಪಳಿ ನಿರ್ಮಿಸಿ ಮುಸ್ಲಿಂ ಬಾಂಧವರು ಪ್ರತಿಭಟನೆ ನಡೆಸಿದರು.
ಶುಕ್ರವಾರದ ಸಾಮೂಹಿಕ ಪ್ರಾರ್ಥನೆಯ ನಂತರ ಮೆಕ್ಕಾ ಮಸೀದಿಯ ಮುತ್ತುವಲ್ಲಿ ನೇತೃತೃದಲ್ಲಿ ನೂರಾರು ಮುಸ್ಲಿಮರು ಫಲಕಗಳನ್ನು ಪ್ರದರ್ಶಿಸುವ ಮೂಲಕ ಕೇಂದ್ರ ಸರಕಾರ ಜಾರಿಗೆ ತಂದಿರುವ, ಮುಸ್ಲಿಂ ಬಾಂಧವರಿಗೆ ಕಂಟಕವಾದ ವಕ್ಪ್ ಮಸೂದೆಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಮಾಜ ಸೇವಕ ತಾಜುದ್ದೀನ್ ಷರೀಫ್, ಕರ್ನಾಟಕ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ನಿರ್ದೇಶನದಂತೆ ರಾಜ್ಯದ ಪ್ರತಿ ಹಳ್ಳಿಗಳಲ್ಲಿಯೂ ಶುಕ್ರವಾರದ ನಮಾಜ ನಂತರ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಲಾಗಿದೆ. ಕೇಂದ್ರ ಸರಕಾರ ಜಾರಿಗೆ ತಂದಿರುವ ತಿದ್ದುಪಡಿ ಮಸೂದೆ ಮುಸ್ಲಿಂ ವಿರೋಧಿ ಎನ್ನುವುದರ ಜೊತೆಗೆ, ಸಂವಿಧಾನ ವಿರೋಧಿಯೂ ಆಗಿದೆ. ಭಾರತೀಯ ಸಂವಿಧಾನದಲ್ಲಿಯೇ ಅವರವರ ಧರ್ಮ ಪಾಲನೆಗೆ ಅವಕಾಶವಿದೆ.
ಅದು ಹಿಂದು, ಮುಸ್ಲಿಂ, ಕ್ರಿಶ್ಚಿಯನ್, ಬೌದ್ದ, ಪಾರ್ಸಿ ಎಲ್ಲರಿಗೂ ಅನ್ವಯಿಸುತ್ತದೆ. ಈ ಹಕ್ಕನ್ನೇ ಕಸಿಯುವ ಕೆಲಸವನ್ನು ಕೇಂದ್ರ ಸರಕಾರ ಮಾಡಲು ಹೊರಟಿದೆ. ಇದನ್ನು ಮುಸ್ಲಿಂ ಭಾಂಧವರು ಎಂದಿಗೂ ಒಪ್ಪಲು ಸಾಧ್ಯವಿಲ್ಲ. ಮುಂಬರುವ ದಿನಗಳಲ್ಲಿ ಪ್ರತಿಭಟನೆ ಮತ್ತಷ್ಟು ಉಗ್ರ ಸ್ವರೂಪ ತಾಳಲಿದೆ. ಕೇಂದ್ರದ ಯಾವ ಒತ್ತಡಕ್ಕೂ ನಾವು ಮಣಿಯುವುದಿಲ್ಲ ಎಂದರು.
ಇತ್ತೀಚಿನ ದಿನಗಳಲ್ಲಿ ಮುಸ್ಲಿಂರ ಮೇಲೆ ಸರಕಾರದ ದಬ್ಬಾಳಿಕೆ ಹೆಚ್ಚಾಗಿದೆ. ಇದುವರೆಗೂ ನಮ್ಮ ಶಿಕ್ಷಣ ಸಂಸ್ಥೆಗಳ ಮೇಲೆ ಇವರ ಕಣ್ಣಿತ್ತು. ಈಗ ಅದು ನಮ್ಮ ಸಮುದಾಯದ ಆಸ್ತಿಗಳ ಮೇಲೆ ಬಿದ್ದಿದೆ. ನಮ್ಮ ಪೂರ್ವಜರು ಸಮುದಾಯದ ಏಳಿಗೆಗಾಗಿ ಬಿಟ್ಟು ಹೋದ ಜಮೀನನನ್ನು ನಮ್ಮಿಂದು ಕಸಿದುಕೊಳ್ಳಲು ಈ ಹುನ್ನಾರ ನಡೆಸಿದೆ. ಇದಕ್ಕೆ ನಾವು ಆಸ್ಪದ ನೀಡುವುದಿಲ್ಲ ಎಂದರು. ಮುಖಂಡ ಬುರಾನುದ್ದೀನ್ ಪಾಲ್ಗೊಂಡಿದ್ದರು.


