ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತಂತೆ ಯಾವುದೇ ಮಂತ್ರಿ ಅಥವಾ ಶಾಸಕರು ಇನ್ನು ಮುಂದೆ ಹೇಳಿಕೆ ನೀಡಬಾರದು ಎಂದು ತಾಕೀತು ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅಂತಹವರ ವಿರುದ್ಧ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ನಾಯಕ ಸುರ್ಜೆವಾಲಾ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪದೇಪದೇ ಇಂತಹ ಹೇಳಿಕೆ ನೀಡುತ್ತಿರುವ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಅವರಿಗೆ ನೋಟಿಸ್ ನೀಡುತ್ತಿರುವುದಾಗಿ ತಿಳಿಸಿದರು ಶಾಸಕರಾದ’ಬಿ.ಆರ್ ಪಾಟೀಲ, ಬಾಲಕೃಷ್ಣ ಯಾರೇ ಆಗಿರಲಿ. ಇನ್ಮುಂದೆ ಯಾರೂ ಮಾಧ್ಯಮಗಳ ಮುಂದೆ ಹೋಗಬಾರದು’ ಎಂದರು.
ಶಾಸಕರ ಜೊತೆ ಪಕ್ಷ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಪ್ರತ್ಯೇಕ ಸಭೆ ವಿಚಾರವಾಗಿ ಪ್ರತಿಕ್ರಿಯಿಸಿದ ಶಿವಕುಮಾರ್ , ‘ಯಾರಿಗೂ ಗಾಬರಿ ಬೇಡ. ಪಕ್ಷ ಸಂಘಟನೆ ವಿಚಾರಕ್ಕೆ ಸಭೆ ಮಾಡುತ್ತಿದ್ದಾರೆ’ ಎಂದರು.
ಇಡೀ ದೇಶದಾದ್ಯಂತ ಬ್ಲಾಕ್ ಕಾಂಗ್ರೆಸ್ ನಲ್ಲಿ ಬದಲಾವಣೆ ಆಗುತ್ತಿದೆ. ಜಿಲ್ಲಾ ಕಾಂಗ್ರೆಸ್ ಘಟಕದಲ್ಲೂ ಬದಲಾವಣೆ ಆಗುತ್ತಿದೆ. ಖರ್ಗೆಯವರು ಬೆಳಗಾವಿಯಲ್ಲಿ ಈ ವಿಚಾರ ಹೇಳಿದ್ದಾರೆ. ಇದು ಸಂಘಟನೆಯ ವರ್ಷ ಎಂದು ಅವರು ಹೇಳಿದ್ದಾರೆ’ ಎಂದರು.
ಯಾವೆಲ್ಲ ಬದಲಾವಣೆ ತರಬೇಕು. ಎಲ್ಲಿ ಏನು, ಯಾವ ಬಿಲ್ಡಿಂಗ್ ಕಟ್ಟಬೇಕು ಎಂದು ಎಐಸಿಸಿ ನಾಯಕರು ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ. ಇದು ಪಕ್ಷ ಸಂಘಟನೆ ವಿಚಾರವಾಗಿ ಸಭೆ ಅಷ್ಟೇ’ ಎಂದರು.
ಖರ್ಗೆ ಅವರು, ರಾಹುಲ್ ಗಾಂಧಿ ಹಾಗೂ ಪ್ರಧಾನ ಕಾರ್ಯದರ್ಶಿಗಳು ಎಲ್ಲಾ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನು ಕರೆಸಿ ನವದೆಹಲಿಯಲ್ಲಿ ಸಭೆ ಮಾಡಲಾಗಿದೆ. ಆಮೂಲಕ ಕಾಂಗ್ರೆಸ್ ಕಚೇರಿ ನಿರ್ಮಾಣದಿಂದ, ಪಕ್ಷ ಸಂಘಟನೆವರೆಗೂ ಎಲ್ಲಾ ಜವಾಬ್ದಾರಿಯನ್ನು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಶಾಸಕರು ಇಲ್ಲದಿರುವ ಕ್ಷೇತ್ರಗಳ ಜವಾಬ್ದಾರಿಯನ್ನು ಒಬ್ಬೊಬ್ಬ ಶಾಸಕರಿಗೆ ನೀಡಲಾಗಿದೆ ಎಂದು ಹೇಳಿದರು.


