Friday, July 18, 2025
Google search engine
Homeಮುಖಪುಟಲಿಂಕ್ ಕೆನಾಲ್ ಕಾಮಗಾರಿ-ಸಿಎಂ ಬಳಿಗೆ ನಿಯೋಗ ಕೊಂಡೊಯ್ಯಲು ಸಚಿವ ಸೋಮಣ್ಣಗೆ ಆಗ್ರಹ

ಲಿಂಕ್ ಕೆನಾಲ್ ಕಾಮಗಾರಿ-ಸಿಎಂ ಬಳಿಗೆ ನಿಯೋಗ ಕೊಂಡೊಯ್ಯಲು ಸಚಿವ ಸೋಮಣ್ಣಗೆ ಆಗ್ರಹ

ಅವೈಜ್ಞಾನಿಕ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ನಡೆಯುತ್ತಿರುವ ಸಂಕಾಪುರ ಗ್ರಾಮಕ್ಕೆ ಸ್ಥಳ ಪರಿಶೀಲನೆಗಾಗಿ ಜೂನ್.11 ರಂದು ಕೇಂದ್ರ ಜಲ ಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಆಗಮಿಸುತ್ತಿರುವುದನ್ನು ಕರ್ನಾಟಕ ರಾಜ್ಯ ರೈತ ಸಂಘ ಸ್ವಾಗತಿಸುತ್ತದೆ. ಕಾಮಗಾರಿಯನ್ನು ಶಾಶ್ವತವಾಗಿ ರದ್ದು ಮಾಡಲು ಮುಖ್ಯಮಂತ್ರಿಗಳು, ಜಲಸಂಪನ್ಮೂಲ ಸಚಿವರ ಬಳಿ ಜಿಲ್ಲೆಯ ಜನಪ್ರತಿನಿಧಿಗಳು, ರೈತರು, ಹೋರಾಟಗಾರರನ್ನು ನಿಯೋಗ ಕರದುಕೊಂಡು ಹೋಗುವಂತೆ ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಹಾಗು ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಒತ್ತಾಯಿಸಿದ್ದಾರೆ.

ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಅವೈಜ್ಞಾನಿಕ ಲಿಂಕ್ ಕೆನಾಲ್ ಯೋಜನೆಯನ್ನು ವಿರೋಧಿಸಿ ಕಳೆದ ಒಂದು ವರ್ಷದಿಂದ ಪ್ರತಿಭಟನೆಗಳು ನಡೆಯುತ್ತಲೇ ಬಂದಿವೆ. ಜನರ ವಿರೋಧದ ನಡುವೆಯೂ ತಾಂತ್ರಿಕ ಸಮಿತಿಯ ವರದಿಯನ್ನು ಮುಚ್ಚಿಟ್ಟು ಪೊಲೀಸ್ ಸರ್ಪಗಾವಲಿನಲ್ಲಿ ಕಾಮಗಾರಿ ನಡೆಸಲು ಮುಂದಾದ ಪರಿಣಾಮ, ಮೇ 31ರಂದು ನಡೆದ ಬೃಹತ್ ಪ್ರತಿಭಟನೆಯ ಭಾಗವಾಗಿ ಕಾಮಗಾರಿ ಸ್ಥಗಿತ ಮಾಡಲಾಗಿದೆ. ಆದರೆ ಪ್ರತಿಭಟನೆಯಲ್ಲಿ ಪಾಲ್ಗೊಂಡ ಸ್ವಾಮಿಗಳು, ಶಾಸಕರು ಸೇರಿದಂತೆ ಸುಮಾರು 41 ಜನ ಮೇಲೆ 13ಕ್ಕೂ ಹೆಚ್ಚು ದೂರುಗಳನ್ನು ದಾಖಲಿಸಲಾಗಿದೆ ಎಂದರು.

ಹೇಮಾವತಿ ಲಿಂಕ್ ಕೆನಾಲ್‌ನಿಂದ ತುಮಕೂರು ಜಿಲ್ಲೆಯ ಸುಮಾರು 7ಕ್ಕೂ ಹೆಚ್ಚು ತಾಲೂಕುಗಳಲ್ಲಿ ನೀರಿನ ಕೊರತೆ ಉಂಟಾಗಲಿದೆ. ಹಲವು ಬಾರಿ ಅಧಿಕಾರಿಗಳು ಮತ್ತು ಸಂಬAಧಪಟ್ಟ ಸಚಿವರ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಲ ಸಂಪನ್ಮೂಲ ಸಚಿವರುಗಳು ಕಾಮಗಾರಿಯನ್ನು ಆರಂಭಿಸುವುದಾಗಿ ಮಾತನಾಡುತಿದ್ದಾರೆ. ಇದು ಈ ಭಾಗದ ಜನರನ್ನು ಮತ್ತಷ್ಟು ಆಂತಕಕ್ಕೆ ದೂಡಿದೆ. ಅಲ್ಲದೆ ಎಂತಹ ಹೋರಾಟಕ್ಕೂ ಸಿದ್ದರಾಗಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿದೆ ಎಂದು ಹೇಳಿದರು.

ಕೇಂದ್ರದ ಜಲಶಕ್ತಿ ಮತ್ತು ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಜಿಲ್ಲೆಯ ಹಿತದೃಷ್ಟಿಯಿಂದ ಜಿಲ್ಲೆಯ ಶಾಸಕರು, ಜನಪ್ರತಿನಿಧಿಗಳು, ರೈತ ಹೋರಾಟಗಾರರ ನಿಯೋಗವನ್ನು ಮುಖ್ಯಮಂತ್ರಿಗಳು, ಜಲಸಂಪನ್ಮೂಲ ಸಚಿವರ ಬಳಿ ತೆಗೆದುಕೊಂಡು ಹೋಗಿ, ಈ ಯೋಜನೆಯಿಂದ ಜಿಲ್ಲೆಯ ನೀರಾವರಿಯ ಮೇಲಾಗುವ ಅಪಾಯವನ್ನು ಮನದಟ್ಟು ಮಾಡಿಕೊಟ್ಟು, ಈ ಅನಗತ್ಯ ಮತ್ತು ಅವೈಜ್ಞಾನಿಕ ಯೋಜನೆಯನ್ನು ಕೈಬಿಡುವಂತೆ ಒತ್ತಾಯ ತರಬೇಕೆಂದು ಆಗ್ರಹಿಸಿದ್ದಾರೆ.

ಕುಣಿಗಲ್ ತಾಲೂಕಿಗೆ ಹಂಚಿಕೆಯಾಗಿರುವ 3.3 ಟಿ.ಎಂ.ಸಿ ನೀರು ಹರಿಸಲು ತುಮಕೂರು ಜಿಲ್ಲೆಯ ಯಾರ ವಿರೋಧವೂ ಇಲ್ಲ.ಆದರೆ ಆ ನೀರನ್ನು ಅವೈಜ್ಞಾನಿಕ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಬಿಟ್ಟು, ಮೂಲ ಯೋಜನೆಯಂತೆ ನಾಲೆಯ ಮೂಲಕ ತೆಗೆದುಕೊಂಡು ಹೋಗಲು ಯಾವ ಅಭ್ಯಂತರವೂ ಇಲ್ಲ.ಮೂಲ ನಾಲೆಯ ಆಗಲೀಕರಣ ಕಾರ್ಯ ಚಾಲ್ತಿಯಲ್ಲಿದ್ದು, ಉಳಿದ ನಾಲೆ ಆಗಲೀಕರಣ ಕಾಮಗಾರಿ ನಡೆಸಿ, ಕುಣಿಗಲ್ ಭಾಗದ ರೈತರ ಬೇಡಿಕೆಯಂತೆ ಅವರ ಪಾಲಿನ ನೀರು ತೆಗೆದುಕೊಂಡು ಹೋಗಲು ಅನುವು ಮಾಡಿಕೊಟ್ಟು, ಸಮಸ್ಯೆಗೆ ಸೂಕ್ತ ಪರಿಹಾರ ರೂಪಿಸಬೇಕೆಂದು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular