ಬೇಡ ಜಂಗಮ ಮತ್ತು ಬುಡ್ಗ ಜಂಗಮ ಜಾತಿ ಹೆಸರಿನಲ್ಲಿ ಬೇರೆ ಸಮುದಾಯಗಳು ಜಾತಿ ಪ್ರಮಾಣ ಪಡೆದುಕೊಳ್ಳುವುದಲ್ಲದೇ, ಒಳ ಮೀಸಲಾತಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳುತ್ತಿರುವುದನ್ನು ತಪ್ಪಿಸುವಂತೆ ಒತ್ತಾಯಿಸಿ ಒಳಮೀಸಲಾತಿ ಹೋರಾಟ ಸಮಿತಿ ಪದಾಧಿಕಾರಿಗಳು ತುಮಕೂರು ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ತುಮಕೂರಿನಲ್ಲಿ ಮನವಿ ಸಲ್ಲಿಸಿ ಮಾತನಾಡಿದ ಒಳಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ವೈ.ಕೆ.ಬಾಲಕೃಷ್ಣಪ್ಪ ಅವರು, ತುಮಕೂರು ಜಿಲ್ಲೆ ಆಂಧ್ರಪ್ರದೇಶಕ್ಕೆ ಹೊಂದಿಕೊಂಡರೂ ಸಹ ಜಿಲ್ಲೆಯಲ್ಲಿ ಬೇಡ ಜಂಗಮ ಮತ್ತು ಬುಡ್ಗ ಜಂಗಮ ಸಮುದಾಯದವರು ಇಲ್ಲದೇ ಇದ್ದರು ಜಿಲ್ಲೆಯಲ್ಲಿ ಬುಡ್ಗ ಜಂಗಮ ಮತ್ತು ಬೇಡ ಜಂಗಮ ಜಾತಿಪ್ರಮಾಣ ಪತ್ರಗಳನ್ನು ಅಕ್ರಮವಾಗಿ ಪ್ರಭಾವಿ ಸಮುದಾಯಗಳಿಗೆ ನೀಡಲಾಗುತ್ತಿದೆ ಎಂದು ದೂರಿದರು.
ಆಂಧ್ರಪ್ರದೇಶದಲ್ಲಿರುವ ಬೇಡ ಜಂಗಮ ಮತ್ತು ಬುಡ್ಗ ಜಂಗಮ ಸಮುದಾಯಗಳು ಶುದ್ಧ ಮಾಂಸಹಾರಿಗಳಾಗಿದ್ದಾರೆ. ಆದರೆ ತುಮಕೂರು ಜಿಲ್ಲೆಯಲ್ಲಿರುವ ಬೇಡ ಜಂಗಮ ಮತ್ತು ಬುಡ್ಗ ಜಂಗಮ ಜಾತಿ ಹೆಸರಿನಲ್ಲಿ ಜಾತಿ ಪ್ರಮಾಣಪತ್ರ ಪಡೆದುಕೊಂಡಿರುವವರು ಶುದ್ಧ ಸಸ್ಯಾಹಾರಿಗಳಾಗಿದ್ದರೂ ಸಹ ಕಂದಾಯ ಇಲಾಖೆ ಅಧಿಕಾರಿಗಳ ಲೋಪದಿಂದ ಬೇಡ ಜಂಗಮ, ಬುಡ್ಗಜಂಗಮ ಜಾತಿ ಪ್ರಮಾಣ ಪತ್ರಗಳನ್ನು ನೀಡಲಾಗುತ್ತಿದ್ದು, ಪ್ರಮಾಣ ಪತ್ರ ನೀಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಛಲವಾದಿ ಸಮುದಾಯದ ಮುಖಂಡ ಶ್ರೀನಿವಾಸಪ್ಪ ಮಾತನಾಡಿ, ಅಸ್ಪೃಶ್ಯ ಸಮುದಾಯಗಳಿಗೆ ಸಂವಿಧಾನ ನೀಡಿರುವ ಮೀಸಲಾತಿ ಹಕ್ಕನ್ನು ಕಸಿಯಲು ಪ್ರಬಲ, ಬಲಾಢ್ಯ ಸಮುದಾಯಗಳು ಬೇಡ ಜಂಗಮ, ಬುಡ್ಗ ಜಂಗಮ ಜಾತಿ ಹೆಸರಿನಲ್ಲಿ ಪ್ರಮಾಣ ಪತ್ರ ಪಡೆದುಕೊಳ್ಳುವ ಮೂಲಕ ಸರ್ಕಾರದ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಸರ್ಕಾರ ನ್ಯಾಯಮೂರ್ತಿ ನಾಗಮೋಹನದಾಸ್ ನೇತೃತ್ವದಲ್ಲಿ ನಡೆಸುತ್ತಿರುವ ಒಳಮೀಸಲಾತಿ ಜಾತಿಗಣತಿ ಸಮೀಕ್ಷೆಯಲ್ಲಿ ಶಿಕ್ಷಕರು ಮನೆಮನೆಗೆ ತೆರಳಿ ಸಮೀಕ್ಷೆ ಮಾಡುತ್ತಿರುವ ವೇಳೆ ಅನ್ಯ ಸಮುದಾಯಗಳು ಮೀಸಲಾತಿ ಪಡೆಯುವ ದುರುದ್ದೇಶದಿಂದ ಬುಡ್ಗ ಜಂಗಮ, ಬೇಡ ಜಂಗಮ ಹೆಸರಿನಲ್ಲಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳುತ್ತಿರುವುದು ಹೆಚ್ಚಾಗಿದ್ದು, ಬುಡ್ಗ ಜಂಗಮ ಮತ್ತು ಬೇಡ ಜಂಗಮ ಜಾತಿಗಳನ್ನು ಸಮೀಕ್ಷೆಯಲ್ಲಿ ಪಾಲ್ಗೊಳ್ಳುವುದನ್ನು ನಿಯಂತ್ರಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಮಾಜಿ ಸದಸ್ಯ ನರಸೀಯಪ್ಪ, ಛಲವಾದಿ ಮಹಾಸಭಾ ಅಧ್ಯಕ್ಷ ಭಾನುಪ್ರಕಾಶ್, ರಂಗಯ್ಯ, ಪಿ.ಎನ್.ರಾಮಯ್ಯ, ಚಂದ್ರಶೇಖರ್, ಗ್ರಾ.ಪಂ.ಸದಸ್ಯ ಗಿರೀಶ್ ಸೇರಿದಂತೆ ಇತರರು ಇದ್ದರು.


