ತಂತಿ ಬೇಲಿಯ ಮೇಲೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತುಂಡಾಗಿ ಬಿದ್ದ ಪರಿಣಾಮ ಅಲ್ಲೇ ಆಟವಾಡುತ್ತಿದ್ದ ನಾಲ್ಕು ವರ್ಷದ ಮಗು ತಂತಿಯನ್ನು ಮುಟ್ಟಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸಮೀಪದ ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕು ದೊಡ್ಡಗೊರಾಘಟ್ಟ ಗ್ರಾಮದಲ್ಲಿ ನಡೆದಿದೆ.
ತುರುವೇಕೆರೆ ತಾಲ್ಲೂಕಿನ ದೊಡ್ಡಗೊರಾಘಟ್ಟದ ವಾಸಿ ಚಂದನ್ ಶೆಟ್ಟಿ ಅವರ ನಾಲ್ಕು ವರ್ಷದ ಪೋಷಿತ್ ಶೆಟ್ಟಿ ಆಕಸ್ಮಿಕವಾಗಿ ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟ ಬಾಲಕ.
ಪೋಷಿತ್ ಶೆಟ್ಟಿ ತನ್ನ ಮನೆಯ ಮುಂಭಾಗದಲ್ಲಿ ಆಟವಾಡುವ ವೇಳೆ ಮನೆಗೆ ಹೊಂದಿಕೊಂಡಿರುವ ತೋಟಕ್ಕೆ ಹಾಕಲಾಗಿದ್ದ ತಂತಿ ಬೇಲಿಯ ಮೇಲೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು ಎಂದು ಹೇಳಲಾಗಿದೆ. ಈ ಸಂದರ್ಭದಲ್ಲಿ ಮಗು ತಿಳಿಯದೇ ತಂತಿ ಬೇಲಿಯನ್ನು ಮುಟ್ಟಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದೆ ತಿಳಿದುಬಂದಿದೆ.
ಘಟನೆ ನಡೆದ ಸ್ಥಳಕ್ಕೆ ಸಿಪಿಐ ಲೋಹಿತ್ ಕುಮಾರ್, ದಂಡಿನಶಿವರ ಪೋಲಿಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಮೂರ್ತಿ, ಬೆಸ್ಕಾಂನ ಎಇಇ ಎನ್.ಸಿ.ರಾಜಶೇಖರ್, ಶಾಖಾಧಿಕಾರಿ ಜಾನ್ ಮಧುಕರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಪೋಷಿತ್ ಶೆಟ್ಟಿ ಸಾವಿಗೆ ಕಂಬನಿ ಮಿಡಿದಿರುವ ಗ್ರಾಮಸ್ಥರು ಬೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೃತ ಪೋಷಿತ್ ಶೆಟ್ಟಿ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ಬೆಸ್ಕಾಂ ನಿಂದ ನೀಡಲಾಗುವುದು ಎಂದು ಬೆಸ್ಕಾಂ ಎಇಇ ಎನ್.ಸಿ.ರಾಜಶೇಖರ್ ಭರವಸೆ ನೀಡಿದ್ದಾರೆ. ದಂಡಿನಶಿವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.


