Thursday, January 29, 2026
Google search engine
Homeಮುಖಪುಟತುಮಕೂರು: ಉಗ್ರರ ದಾಳಿ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

ತುಮಕೂರು: ಉಗ್ರರ ದಾಳಿ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿದ ದಾಳಿ ಖಂಡಿಸಿ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ತುಮಕೂರು ನಗರದಲ್ಲಿ ರಾಷ್ಟ್ರಧ್ವಜ ಪ್ರದರ್ಶಿಸುತ್ತಾ ಶಾಂತಿಯುತ ಮೆರವಣಿಗೆ ನಡೆಸಿದರು.

ಬಿಜಿಎಸ್ ವೃತ್ತದಿಂದ ಭದ್ರಮ್ಮ ವೃತ್ತದವರೆಗೆ ಪಾದಯಾತ್ರೆ ನಡೆಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು, ಪ್ರವಾಸಿಗರ ಮೇಲೆ ಅಮಾನುಷವಾಗಿ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ ಭಯೋತ್ಪಾದಕರ ಕೃತ್ಯವನ್ನು ಖಂಡಿಸಿದರು, ಕೇಂದ್ರ ಸರ್ಕಾರ ತಕ್ಕ ಪ್ರತ್ಯುತ್ತರ ನೀಡಬೇಕು, ಈ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ತಮ್ಮ ಬೆಂಬಲವಿದೆ ಎಂದು ಘೋಷಿಸಿದರು.

ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಇಲಾಹಿ ಸಿಕಂದರ್ ಮಾತನಾಡಿ, ಪ್ರವಾಸಿಗರ ಸ್ವರ್ಗವಾಗಿರುವ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಪ್ರವಾಸಿಗರನ್ನು ಹತ್ಯೆ ಮಾಡಿರುವುದು ನೋವಿನ ಸಂಗತಿ, ಮೃತರ ಆತ್ಮಕ್ಕೆ ಶಾಂತಿ ದೊರೆಯಲಿ ಹಾಗೂ ಅವರ ಕುಟುಂಬದವರಿಗೆ ನೋವು ಭರಿಸುವ ಶಕ್ತಿ ಬರಲಿ ಎಂದು ಪ್ರಾರ್ಥಿಸಿದರು.
ಹಿಂದೆ ಇಂತಹುದೇ ಘಟನೆ ನಡೆದಾಗ ಕೇಂದ್ರ ಸರ್ಕಾರ ಒಂದು ತಲೆಗೆ ಎರಡು ತಲೆ ತರುವ ಭರವಸೆ ನೀಡಿತ್ತು, ಈಗ ಆ ಭರವಸೆ ಈಡೇರಿಸಿದರೆ ಮೃತರ ಆತ್ಮಕ್ಕೆ ಶಾಂತಿ ದೊರೆಯುತ್ತದೆ. ಕೇಂದ್ರ ಸರ್ಕಾರ ಭಯೋತ್ಪಾದಕರಿಗೆ ತಿರುಗೇಟು ನೀಡಿ ತಕ್ಕ ಪಾಠ ಕಲಿಸಬೇಕು. ಭಯೋತ್ಪಾದನೆಗೆ ಯಾವುದೇ ಜಾತಿ, ಧರ್ಮ ಇಲ್ಲ, ಈ ವಿಚಾರದಲ್ಲಿ ಕ್ಷುಲ್ಲಕ ರಾಜಕಾರಣ ಮಾಡದೆ ಭಯೋತ್ಪಾದಕರನ್ನು ಬಗ್ಗುಬಡಿಯಲು, ದೇಶದ ಐಕ್ಯತೆ ಪ್ರದರ್ಶಿಸಲು ಜಾತಿ, ಧರ್ಮ, ಪಕ್ಷ ಭೇದ ಮರೆತು ಎಲ್ಲರೂ ಕೇಂದ್ರ ಸರ್ಕಾರಕ್ಕೆ ಬೆಂಬಲ ನೀಡಬೇಕು ಎಂದರು.

ಕಾಶ್ಮೀರದಲ್ಲಿ ಉಳಿದಿರುವ ನಮ್ಮ ರಾಜ್ಯದ ಪ್ರವಾಸಿಗರನ್ನು ಸುರಕ್ಷತೆಯಿಂದ ಕರೆತರಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಸಂತೋಷ್ ಲಾಡ್ ಅವರು ಮಾಡುತ್ತಿರುವ ಪ್ರಯತ್ನ ಶ್ಲಾಘನೀಯ. ಘಟನೆಯಲ್ಲಿ ನೋಂದವರ ಪರವಾಗಿ ರಾಜ್ಯ ಸರ್ಕಾರವಿದೆ ಎಂದು ಹೇಳಿದರು.

ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ನಿಕಿಲ್ ರಾಜಣ್ಣ ಮಾತನಾಡಿ, ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ಕೃತ್ಯವನ್ನು ಯಾವ ದೇವರು, ದೇಶದ ಯಾರೊಬ್ಬರೂ ಕ್ಷಮಿಸಲಾರರು. ಭಯೋತ್ಪಾದನೆಯನ್ನು ಬಗ್ಗುಬಡಿಯಲು ಕೇಂದ್ರ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಈ ವಿಚಾರದಲ್ಲಿ ಸರ್ಕಾರಕ್ಕೆ ಎಲ್ಲರೂ ಬೆಂಬಲ ಕೊಡೋಣ ಎಂದರು.

ಗುಪ್ತಚರ ಇಲಾಖೆ ಎಚ್ಚರ ವಹಿಸಿದ್ದರೆ ಈ ದುರ್ಘಟನೆ ತಪ್ಪಿಸಲು ಸಾಧ್ಯ ಆಗುತ್ತಿತ್ತೇನೋ, ನಡೆಯಬಾರದ ದುರಂತ ನಡೆದು ಹೋಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ಕೇಂದ್ರ ಸರ್ಕಾರ ಎಚ್ಚರ ವಹಿಸಿಬೇಕು ಎಂದು ಹೇಳಿದರು.

ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮಾನ್ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಘಟಕದ ಪದಾಧಿಕಾರಿಗಳು ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular