ಕರ್ನಾಟಕದಲ್ಲಿ ಸಮ ಸಮಾಜ ನಿರ್ಮಾಣವಾಗಬೇಕಾದರೆ ಸಾಮಾಜಿಕ ಮತ್ತು ಶೈಕ್ಷಣಿಕ ಜಾತಿವಾರು ಸಮೀಕ್ಷಾ ವರದಿ ಅತ್ಯಗತ್ಯ. ರಾಜ್ಯವು ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಸಾಕಷ್ಟು ಅಸಮಾನತೆಯಿಂದ ಕೂಡಿದೆ. ಈ ಅಸಮಾನತೆ ಬಸವಣ್ಣ, ಅಲ್ಲಮ, ಅಂಬೇಡ್ಕರ್, ಕನಕದಾಸರ ಸಮ ಸಮಾಜ ನಿರ್ಮಾಣದ ಆಶಯಕ್ಕೆ ವಿರುದ್ಧವಾಗಿದೆ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳ್ವೆ ಆಗಬೇಕಾದರೆ ಹೆಚ್ ಕಾಂತರಾಜು ಆಯೋಗದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ವರದಿ ಕೂಡಲೇ ಜಾರಿ ಗೊಳಿಸಬೇಕು ಎಂದು ಜಾಗ್ರತ ಯುವ ಕ್ರಾಂತಿ ಪಡೆ ಸಂಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದು ಬಿ ಎಸ್ ಸೂರನಹಳ್ಳಿ ಹೇಳಿದರು.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸಂಬಂಧಿಸಿದಂತೆ ಎಚ್.ಕಾಂತರಾಜ ಆಯೋಗದ ವರದಿಯು ವೈಜ್ಞಾನಿಕವಾಗಿಯೇ ಇದ್ದು, ಅದನ್ನು ಸರ್ಕಾರವು ಯಥಾವತ್ತಾಗಿ ಅಂಗೀಕರಿಸಬೇಕು ಮತ್ತು ಶಿಫಾರಸುಗಳನ್ನು ಅನುಷ್ಠಾನಕ್ಕೆ ತರಬೇಕು. ದಿನದಿಂದ ದಿನಕ್ಕೆ ಸರ್ಕಾರ ಈ ವರದಿಯನ್ನು ಮಂಡನೆ ಮಾಡಲು ಮೀನಾಮೇಶ ಎಣಿಸುತ್ತಿದೆ. ಸಂವಿಧಾನ ಕಲ್ಪಿಸಿದ ಅವಕಾಶಗಳು ಪ್ರತಿಯೊಬ್ಬರಿಗೂ ಸಿಗುವುದಕ್ಕಾಗಿ ಸಿದ್ದರಾಮಯ್ಯ ಕೂಡಲೇ ಸಮೀಕ್ಷೆಯನ್ನು ಅಂಗೀಕರಿಸಿ ಜಾರಿಗೊಳಿಬೇಕು ಎಂದು ಒತ್ತಾಯಿಸಿದ್ದಾರೆ.
ಹಿಂದಿನ ಕಾಲದಿಂದಲೂ ಕೂಡ ಬಲಿಷ್ಠ ಸಮುದಾಯಗಳು ಸರ್ಕಾರದ ಎಲ್ಲಾ ಸವಲತ್ತುಗಳನ್ನು ಅಥವಾ ಸಾಮಾಜಿಕ ಸೌಲಭ್ಯಗಳನ್ನು ಪಡೆಯುತ್ತಾ ಬಂದಿದೆ. ಇನ್ನು ಮುಂದಾದರೂ ಶೋಷಿತ ಅಲ್ಪಸಂಖ್ಯಾತ, ಹಿಂದುಳಿದ ವರ್ಗ, ಹಾಗೂ ದಲಿತ ಸಮುದಾಯಗಳಿಗೆ ಹಾಗೂ ಈ ಸಮುದಾಯದ ಮಕ್ಕಳ ಮುಂದಿನ ಉಜ್ವಲ ಭವಿಷ್ಯಕ್ಕಾಗಿ ಸರ್ಕಾರ ಈ ಕೂಡಲೇ ವರದಿಯನ್ನು ಜಾರಿಗೆ ಮಾಡಬೇಕು ಎಂದಿದ್ದಾರೆ.
ಯಾವ ಯಾವ ಕಾಲದಲ್ಲಿ ಒಬಿಸಿ, ಎಸ್ ಸಿ, ಎಸ್ ಟಿ ಸಮುದಾಯದಗಳಿಗೆ, ಅಲ್ಪಸಂಖ್ಯಾತರಿಗೆ ಸಾಮಾಜಿಕ ನ್ಯಾಯ ಕಲ್ಪಿಸಲು ಸರ್ಕಾರಗಳು ಆಯೋಗಗಳನ್ನು ರಚನೆ ಮಾಡಿದೆಯೋ ಆಗೆಲ್ಲ ಅದನ್ನು ಮೇಲ್ಜಾತಿಯ ಜಾತಿವಾದಿಗಳು, ಶೋಷಕರು, ಶತಾಯ ಗತಾಯ ವಿರೋಧಿಸುತ್ತಲೇ ಬಂದಿದ್ದಾರೆ ಮತ್ತು ಅಡ್ಡಿಪಡಿಸುತ್ತಲೇ ಬಂದಿದ್ದಾರೆ ಎಂದು ಹೇಳಿದ್ದಾರೆ.
ಅದೇ ರೀತಿಯಾಗಿ ಮಂಡಲ್ ಆಯೋಗ ವರದಿ ವಿರೋಧ, ಚಿನ್ನಪ್ಪ ರೆಡ್ಡಿ ಆಯೋಗ ವಿರೋಧ ಮಾಡಿಕೊಂಡೆ ಬಂದಂತಹ ಮೇಲ್ವರ್ಗದ ಶೋಷಕರು ಇಂದು ಕೂಡ ಹೆಚ್. ಕಾಂತರಾಜು ವರದಿಯನ್ನು ವಿರೋಧ ಮಾಡುತ್ತಾ ಅದೇ ನೀಚತನಕ್ಕೆ ಇಳಿದಿದ್ದಾರೆ.
ಅದೆಷ್ಟೋ ಶೋಷಿತ ಸಮುದಾಯಗಳಿಗೆ ಬಾಯೇ ಇಲ್ಲ. ಹಾಗಾಗಿ ಧ್ವನಿಯು ಇಲ್ಲ. ದೊಡ್ಡ ಬಾಯಿ, ದೊಡ್ಡ ಧ್ವನಿ ಇರುವ ಪ್ರಬಲ ಸಮುದಾಯಗಳು ಎನಿಸಿಕೊಂಡಿರುವವರು ಹಲವು ದಶಕಗಳಿಂದ ತಮ್ಮದೇ ದೊಡ್ಡ ಸಮುದಾಯ, ಬಲಿಷ್ಠ ಸಮುದಾಯ ಎಂದು ಬಿಂಬಿಸಿ, ಅಧಿಕಾರ ಅನುಭವಿಸುತ್ತಿರುವ ಸಮುದಾಯಗಳು ಈ ಸಮೀಕ್ಷಾ ವರದಿ ವಿರೋಧಸುತ್ತ ಅದನ್ನು ಬಿಡುಗಡೆ ಮಾಡದಂತೆ, ಜಾರಿ ಗೊಳಿಸದಂತೆ ಸರ್ಕಾರಕ್ಕೆ ಒತ್ತಡ ಏರಲು ಮುಂದಾಗಿದ್ದಾರೆ. ಆದ್ದರಿಂದ ರಾಜ್ಯದ ಇಡೀ ಅಹಿಂದ, ಶೋಷಿತ ಸಮುದಾಯಗಳು ಇಂದು ಎಲ್ಲರು ಒಗ್ಗೂಡಿ ಸಾಮಾಜಿಕ ಮತ್ತು ಶೈಕ್ಷಣಿಕ ಜಾತಿವಾರು ಸಮೀಕ್ಷಾ ವರದಿ ಪರ ಧ್ವನಿ ಎತ್ತಬೇಕಿದೆ ಎಂದು ಹೇಳಿದರು.


