ಬಾಬಾ ಸಾಹೇಬರು ರಚಿಸಿದ ಸಂವಿಧಾನವು ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠ ಸಂವಿಧಾನ. ಈ ಮೂಲಕ ಸಮಾಜದ ಎಲ್ಲರೂ ಸರಿ ಸಮಾನವಾಗಿ ಬದುಕಲು ಅವಕಾಶ ನೀಡಿದೆ ಎಂದು ತುಮಕೂರಿನ ರಾಮಾಜೋಯಿಸ್ ನಗರದ ನಾಗರೀಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಡಿ.ಎಚ್.ವಸಂತ ಕುಮಾರ್ ತಿಳಿಸಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿಯ ಅಂಗವಾಗಿ ಸಂವಿಧಾನದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಬೈಕ್ ಮತ್ತು ಕಾರುಗಳ ರ್ಯಾಲಿ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಂವಿಧಾನದ ಆಶಯಗಳನ್ನು ಮುಂದಿನ ತಲೆಮಾರಿಗೆ ತಲುಪಿಸಬೇಕಿದೆ ಎಂದರು.
ವೇದಿಕೆಯ ಕಾರ್ಯದರ್ಶಿ ಎಸ್.ಆನಂದ ಮೂರ್ತಿ ಮಾತನಾಡಿ, ವಿಶ್ವ ಜ್ಞಾನಿ ಅಂಬೇಡ್ಕರ್ ಅವರ ಆಶಯದಂತೆ ಎಲ್ಲಾ ದಲಿತರು ಒಟ್ಟಾಗಿ ಸಮಾಜ ಕಟ್ಟುವ ಕೆಲಸ ಮಾಡಬೇಕಿದೆ. ಶಿಕ್ಷಣವನ್ನು ಪ್ರತಿಯೊಬ್ಬ ವ್ಯಕ್ತಿಯೂ ಪಡೆಯಲು ಜಾಗೃತಿ ಮೂಡಿಸಬೇಕಿದೆ ಎಂದು ಹೇಳಿದರು.
ರಾಮಾಜೋಯಿಸ್ ನಗರದ ಅಂಬೇಡ್ಕರ್ ಪಾರ್ಕಿನಿಂದ ಆರಂಭಗೊಂಡ ಬೈಕ್, ಕಾರು ರ್ಯಾಲಿ ಕುಣಿಗಲ್ ರಸ್ತೆ, ಲಕ್ಕಪ್ಪ ಸರ್ಕಲ್, ಟೌನ್ ಹಾಲ್ ಸರ್ಕಲ್ ಮೂಲಕ ಸಾಗಿ, ಮಂಡಿಪೇಟೆ ಮುಖ್ಯ ರಸ್ತೆಯಲ್ಲಿ ಸಾಗಿ ಜೆ.ಸಿ ರಸ್ತೆಯ ಮೂಲಕ ಅಂಬೇಡ್ಕರ್ ಪಾರ್ಕಿನಲ್ಲಿ ಕೊನೆಗೊಂಡಿತು.
ಛಲವಾದಿ ಮಹಾಸಭಾದ ಅಧ್ಯಕ್ಷ ಡಾ.ಪಿ.ಚಂದ್ರಪ್ಪ, ಛಲವಾದಿ ಸಮುದಾಯದ ಮುಖಂಡರಾದ ಶ್ರೀನಿವಾಸ್, ಚಂದ್ರಶೇಖರ್, ರಾಜಯ್ಯ,ಎಚ್.ಎಂ.ಟಿ.ರಾಜಣ್ಣ, ನರಸಿಂಹ ಮೂರ್ತಿ, ವೇದಿಕೆಯ ನಿರ್ದೇಶಕರಾದ ಶ್ರೀಧರ್ , ಪಾತಲಿಂಗಪ್ಪ, ಉಮೇಶ, ಪ್ರಶಾಂತ್, ಸದಾಶಿವಯ್ಯ, ಛಲವಾದಿ ವಧು ವರಾನ್ವೇಷಣಾ ಕೇಂದ್ರದ ಮಹೇಶ್ ಚಂದ್ರ , ಹನುಮಂತ ರಾಯ, ಎಲ್.ಐ.ಸಿ. ಎಸ್ಸಿ ಎಸ್ ಟಿ ಸಂಘದ ಮುಖಂಡರಾದ ಸದಾಶಿವ, ಚಂದ್ರಕಲಾ, ರವೀಂದ್ರ, ಅಭಿನಂದನ್. ಸರಸ್ವತಿಪುರಂ, ಸದಾಶಿವನಗರ, ಅಮರಜ್ಯೋತಿ ನಗರದ ನಾಗರೀಕರು ಈ ರ್ಯಾಲಿ ಯಲ್ಲಿ ಭಾಗವಹಿಸಿದ್ದರು.