ವಿವಿಧೆತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತಕ್ಕೆ ಸಮಾನತೆ, ಸ್ವಾತಂತ್ರ ಮತ್ತು ಭಾತೃತ್ವವೆಂಬ ಮೂರು ತತ್ವಗಳನ್ನು ಒಳಗೊಂಡ ಸಂವಿಧಾನವನ್ನು ಬಾಬಾ ಸಾಹೇಬ್‌ಅಂಬೇಡ್ಡಕರ್ ನೀಡಿದ್ದು, ಇದಕ್ಕೆ ಧಕ್ಕೆ ತರುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಎಸ್.ಟಿ.ಶ್ರೀನಿವಾಸ್ ದೂರಿದ್ದಾರೆ.
ತುಮಕೂರು ನಗರದ ಜಿಲ್ಲಾ ಕಾಂಗ್ರೆಸ್‌ಕಚೇರಿಯಲ್ಲಿ ಡಿಸಿಸಿ ಅಧ್ಯಕ್ಷ ಚಂದ್ರಶೇಖರ ಗೌಡ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135ನೇ ಜನ್ಮಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ರಾಜ್ಯದಲ್ಲಿ ಹಾಲಿನ ದರ, ಇಂಧನಗಳ ಮೇಲಿನ ಸೆಸ್ ಹೆಚ್ಚಳವನ್ನೇ ದೊಡ್ಡದು ಮಾಡಿ ಬಿಜೆಪಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಸುತ್ತಿದೆ. ಆದರೆ ಕೇಂದ್ರ ಸರಕಾರ ಗ್ಯಾಸ್ ದರ ಹೆಚ್ಚಳ, ಸಾರ್ವಜನಿಕ ಸಂಸ್ಥೆಗಳ ಖಾಸಗೀಕರಣ, ಇಂಧನ ಬೆಲೆ ಹೆಚ್ಚಳದ ವಿರುದ್ದ ಕಾಂಗ್ರೆಸ್ ಕಾರ್ಯಕರ್ತರು ಸಹ ಹೋರಾಟ ನಡೆಸುವ ಬೆಲೆ ಹೆಚ್ಚಳದ ಹೆಸರಿನಲ್ಲಿ ರಾಜಕೀಯ ಮಾಡಲು ಹೊರಟವರಿಗೆ ತಿರುಗೇಟು ನೀಡುವ ಕೆಲಸ ಆಗಬೇಕಾಗಿದೆ. ಶೋಷಿತರ ಪರವಾಗಿ ದ್ವನಿ ಎತ್ತಬೇಕಾಗಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆಂಚಮಾರಯ್ಯ ಮಾತನಾಡಿ, ವಿಶ್ವಸಂಸ್ಥೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮ ದಿನವನ್ನು ಜ್ಞಾನದ ದಿನವನ್ನಾಗಿ ಆಚರಿಸುತ್ತಿದೆ. ಆದರೆ ಬಿಜೆಪಿ ಕ್ಷುಲ್ಲಕ ರಾಜಕಾರಣಕ್ಕೆ ಅಂಬೇಡ್ಕರ್ ಹೆಸರು ಎಳೆದು ತರುವ ಮೂಲಕ ಅವರ ಹೆಸರಿಗೆ ಮಸಿ ಬಳಿಯಲು ಹೊರಟಿದೆ ಎಂದರು.
ಮಹಿಳಾ ಘಟಕದ ಅಧ್ಯಕ್ಷೆ ಗೀತಾ ರಾಜಣ್ಣ ಮಾತನಾಡಿ, ಭಾರತದ ಸಂವಿಧಾನದ ಮೂಲಕ ಭಾರತದ ಎಲ್ಲಾ ಜನವರ್ಗಗಳಿಗೂ ಬದುಕು ನೀಡಿದ ಬಾಬಾ ಸಾಹೇಬರು ಈ ದೇಶದಿಂದ ಅಸ್ಪೃಷ್ಯತೆ ಕೊನೆಯಾಗಬೇಕು ಎಂಬ ಕನಸು ಕಂಡಿದ್ದರು. ಅದರೆ ಇದುವರೆಗೂ ಅದು ಈಡೇರಿಲ್ಲ. ಇದರ ವಿರುದ್ದ ನಾವು ದ್ವನಿ ಎತ್ತಬೇಕಾಗಿದೆ. ಅದರಲ್ಲಿ ವಿಶೇಷವಾಗಿ ಮಹಿಳೆಯರು ಇದರ ವಿರುದ್ದ ಹೋರಾಟ ರೂಪಿಸಬೇಕಾಗಿದೆ. ಕಾಂಗ್ರೆಸ್ ವಿರುದ್ದ ಬಿಜೆಪಿ ನಡೆಸುತ್ತಿರುವ ಅಪಪ್ರಚಾರಗಳಿಗೆ ತಿರುಗೇಟು ನೀಡುವ ಕೆಲಸ ಆಗಬೇಕೆಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್‌ಗೌಡ ಮಾತನಾಡಿ, ತಾವು ಬಾಲ್ಯದಲ್ಲಿ ಅನುಭವಿಸಿದ ಅಸ್ಪೃಷ್ಯತೆಯ ನೋವುಗಳಿಗೆ ಸಂವಿಧಾನದ ಮೂಲಕ ಪರಿಹಾರ ಕಂಡುಕೊಂಡವರು ಬಾಬಾ ಸಾಹೇಬ್ ಅಂಬೇಡ್ಕರ್, ದೇಶಕ್ಕೆ ಸ್ವಾತಂತ್ರ್ಯ ದೊರೆಯುವ ಮುನ್ನ ಸಾವಿರಾರು ವರ್ಷಗಳಿಂದ ಶೋಷಣೆಗೆ ಒಳಗಾಗಿರುವ ನಿಮ್ನ್ ವರ್ಗಗಳಿಗೆ ಸ್ವಾತಂತ್ರ ಲಭಿಸಬೇಕು ಎಂಬುದು ಅಂಬೇಡ್ಕರ್ ವಾದವಾಗಿತ್ತು. ಅದನ್ನು ಸಕಾರ ಮಾಡಿದರು ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಡಾ..ಎಸ್.ಷಪಿ ಅಹಮದ್, ರೇವಣ್ಣಸಿದ್ದಯ್ಯ, ಬಿ.ಜಿ.ಲಿಂಗರಾಜು, ಆರ್.ರಾಮಕೃಷ್ಣಪ್ಪ, ನಟರಾಜಶೆಟ್ಟಿ ಮಾತನಾಡಿದರು. ಮುಖಂಡರಾದ ಮಾಜಿ ಎಂ.ಎಲ್.ಸಿ ವೇಣುಗೋಪಾಲ್, ನಾರಾಯಣ ಮೂರ್ತಿ, ವಾಲೆಚಂದ್ರಯ್ಯ, ಜಯಮೂರ್ತಿ, ನರಸೀಯಪ್ಪ, ಉಪಾಧ್ಯಕ್ಷರಾದ ವೀರೇಶ ಕುಮಾರ್ ಹಾಲೆನೂರು,ಷಣ್ಮುಖಪ್ಪ, ಹೆಚ್.ಸಿ.ಹನುಮಂತಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಹೇಶ್, ಫಯಾಜ್, ಪಾಲಿಕೆ ಮಾಜಿ ಸದಸ್ಯರಾದ ನಯಾಜ್, ನಾಗಮಣಿ, ಸುಜಾತ, ಸಿಮೆಂಟ್ ಮಂಜಣ್ಣ, ಅನಿಲ್‌ಕುಮಾರ್, ಕೆಂಪರಾಜು ಇದ್ದರು.