ನನ್ನ ಮೇಲೆ ಕಾಂಗ್ರೆಸ್ ಅತ್ಯಾಚಾರ ಮಾಡುತ್ತಿದೆ ಎಂಬ ಗೃಹ ಸಚಿವರು ಹೇಳಿಕೆಗೆ ಕಾಂಗ್ರೆಸ್ ತೀಕ್ಷ್ಣವಾಗಿ ತಿರುಗೇಟು ನೀಡಿದೆ. ಗೃಹ ಸಚಿವರ ಮೇಲೆ ನಮ್ಮ ಪಕ್ಷದ ನಾಯಕರು ಅತ್ಯಾಚಾರ ಮಾಡಿದ್ದೇ ಆದರೆ ಕೂಡಲೇ ಅಂತಹ ನಾಯಕರ ಮೇಲೆ ಎಫ್ಐಆರ್ ದಾಖಲಿಸಿ ಬಂಧಿಸಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸವಾಲು ಹಾಕಿದರು.
ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಮೈಸೂರಿನಲ್ಲಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದು 48 ಗಂಟೆ ಕಳೆದಿದೆ. ಆದರೂ ಆರೋಪಿಗಳನ್ನು ಬಂಧಿಸುವ ಬದಲು ಗೃಹ ಸಚಿವರು ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ ಎಂದು ಹೇಳಿದರು.
ಗೃಹ ಸಚಿವರಿಗೆ ರೇಪ್ ಪದ ಬಳಸುವುದು ಸರಳ. ಅವರಿಗೆ ಪ್ರಿಯವಾದ ಪದವೂ ಹೌದು. ಗೃಹ ಸಚಿವರನ್ನು ಉಗ್ರಪ್ಪ, ಎಚ್.ಎಂ.ರೇವಣ್ಣ, ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಸೇರಿದಂತೆ ಯಾರೇ ರೇಪ್ ಮಾಡಿದ್ದರೂ ಅವರನ್ನು ಬಂಧಿಸಬೇಕು ಎಂದು ತಿಳಿಸಿದರು.
ಮೈಸೂರು ಅತ್ಯಾಚಾರ ಘಟನೆಯಿಂದ ರಾಜ್ಯದ ಇಮೇಜಿಗೆ ಧಕ್ಕೆಯಾಗಿದೆ. ಈಗಿನ ಗೃಹಸಚಿವರ ಕ್ಷೇತ್ರದಲ್ಲೇ ಅತ್ಯಾಚಾರ ನಡೆದಿದೆ. ಬೆಂಗಳೂರಿನಲ್ಲಿ ನಡೆದಿದೆ. ಮಂತ್ರಿಗಳ ಮೇಲೆ ಪ್ರಕರಗಳನ್ನೂ ದಾಖಲಿಸಲಾಗಿದೆ. ಆದರೂ ಈ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಬದಲಿಗೆ ಪ್ರಭಾವಿ ರಾಜಕಾರಣಿಗಳ ರಕ್ಷಣೆಯಲ್ಲಿ ತೊಡಗಿದೆ ಎಂದು ಆರೋಪಿಸಿದರು.
ಯುವತಿಯ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ರಾಜ್ಯ ಸರ್ಕಾರ ಸರಿಯಾಗಿ ನಿಭಾಯಿಸುತ್ತಿಲ್ಲ. ಆರೋಪಿಗಳ ಬಂಧನ ಇದುವರೆಗೂ ಆಗಿಲ್ಲ. ಹೀಗಾಗಿ ಕಾಂಗ್ರೆಸ್ ಪಕ್ಷ ವಿ.ಎಸ್. ಉಗ್ರಪ್ಪ ಅಧ್ಯಕ್ಷತೆಯಲ್ಲಿ ಸತ್ಯಶೋಧನ ತಂಡ ರಚಿಸಿದೆ. ಈ ತಂಡದಲ್ಲಿ ಎಚ್.ಎಂ.ರೇವಣ್ಣ, ಶಾಸಕ ತನ್ವೀರ್ ಸೇಠ್, ರೂಪ, ಶಶಿಕಲ, ಮಲ್ಲಾಜಮ್ಮ, ಮಾನಸ ಇದ್ದು ಮೈಸೂರಿಗೆ ಹೋಗಿ ತನಿಖೆ ನಡೆಸಿ ಸತ್ಯಶೋಧನ ವರದಿಯನ್ನು ನೀಡಲಿದೆ ಎಂದು ಸ್ಪಷ್ಟಪಡಿಸಿದರು.
ರಾಜ್ಯ ಸರ್ಕಾರ ಯಾರ ಪ್ರಭಾವಕ್ಕೂ ಒಳಗಾಗಬಾರದು. ಆರೋಪಿಗಳಿಗೆ ರಕ್ಷಣೆ ನೀಡಬಾರದು. ರಾಜಕಾರಣಿಗಳಿಗೆ ರಕ್ಷಣೆ ನೀಡಿ ಬಿಜೆಪಿ ನೀಚ ಸಂಸ್ಕೃತಿಯತ್ತ ಕೊಂಡುಹೋಗುತ್ತಿದೆ. ನ್ಯಾಯ ಒದಗಿಸಿ, ನಿಷ್ಪಕ್ಷಪಾತ ತನಿಖೆ ನಡೆಸಬೇಕು. ನಮಗೆ ಸರ್ಕಾರದ ಮೇಲೆ ನಂಬಿಕೆ ಇಲ್ಲ. ಪೊಲೀಸರು ಸೂಕ್ತ ತನಿಖೆ ಮಾಡಿ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.