ತುಮಕೂರು ನಗರದಲ್ಲಿ ಕಾನೂನುಬಾಹಿರವಾಗಿ ಕಾರ್ಯಾರಂಭ ಮಾಡಿರುವ ಬೈಕ್ ಟ್ಯಾಕ್ಸಿಗಳ ವ್ಯವಹಾರಕ್ಕೆ ನಿರ್ಬಂಧ ಹಾಕಬೇಕು, ಆಟೋ ಚಾಲಕರ ಹಿತ ಕಾಪಾಡಬೇಕು ಎಂದು ಆಟೊಚಾಲಕರು, ಮಾಲೀಕರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆಶೋಕ್ ಅವರಿಗೆ ಮನವಿ ಸಲ್ಲಿಸಿದರು.
ಆಟೋ ಚಾಲಕರು, ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಪ್ರತಾಪ್ ಮದಕರಿ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿ ಮಾಡಿದ ಆಟೊ ಚಾಲಕರು, ಬೈಕ್ ಟ್ಯಾಕ್ಸಿಗಳು ಕಾರ್ಯಾರಂಭ ಮಾಡಿರುವುದರಿಂದ ಆಟೋಚಾಲಕರ ವ್ಯವಹಾರಕ್ಕೆ ಪೆಟ್ಟು ಬಿದ್ದಿದೆ. ಬಹುತೇಕ ಬಡವರ್ಗದವರೇ ಆಟೋ ಚಾಲನೆ ಮಾಡಿಕೊಂಡು ತಮ್ಮ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ, ಇತ್ತೀಚೆಗೆ ನಗರದಲ್ಲಿ ಅನಧಿಕೃತವಾಗಿ ಬೈಕ್ ಟ್ಯಾಕ್ಸಿಗಳ ಒಡಾಟ ಆರಂಭವಾಗಿದೆ. ಇದಕ್ಕೆ ನಿರ್ಬಂಧ ಹಾಕಬೇಕು, ಅಂತಹ ಬೈಕ್ ಟ್ಯಾಕ್ಸಿಗಳನ್ನು ವಶಕ್ಕೆ ಪಡೆದು ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ತುಮಕೂರು ನಗರದಲ್ಲಿ ಸುಮಾರು 11 ಸಾವಿರ ಆಟೋಗಳಿವೆ. ನಿರುದ್ಯೋಗಿಗಳು ತಮ್ಮ ಬದುಕು ಸಾಗಿಸಲು ಆಟೋ ಚಾಲನೆ ವ್ಯವಹಾರ ಮಾಡುತ್ತಿದ್ದಾರೆ. ಬಾಡಿಗೆ ಹಣದಿಂದ ತಮ್ಮ ಮಕ್ಕಳ ಶಾಲಾ ಕಾಲೇಜು ಖರ್ಚು, ತಂದೆ ತಾಯಿಯರ ಆರೋಗ್ಯದ ವೆಚ್ಚ, ಕುಟುಂಬ ನಿರ್ವಹಣೆ ಇದರಿಂದಲೇ ಸಾಗಬೇಕಾಗಿದೆ. ಸರ್ಕಾರದ ಶಕ್ತಿ ಯೋಜನೆಯಡಿ ಹೆಣ್ಣುಮಕ್ಕಳಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ ವ್ಯವಸ್ಥೆ ಜಾರಿಯಾದಾಗಿನಿಂದ ನಗರದಲ್ಲಿ ಆಟೋ ವ್ಯವಹಾರ ಕುಸಿದಿದೆ ಎಂದರು.
ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದಲ್ಲಿ 170 ಆಟೋ ನಿಲ್ದಾಣಗಳನ್ನು ತೆರವು ಮಾಡಲಾಗಿದೆ. ಹೀಗಾಗಿ ನಗರದ ಆಟೋ ಚಾಲಕರಿಗೆ ಮೂಲಭೂತ ಸೌಲಭ್ಯಗಳು ಇಲ್ಲದಂತಾಗಿವೆ. ಈಗಾಗಲೇ ಆಟೋಗಳ ಸಂಖ್ಯೆಯೂ ಹೆಚ್ಚಾಗಿ ವರಮಾನ ಕಮ್ಮಿಯಾಗುತ್ತಿದೆ. ಹೀಗಿರುವಾಗ ಬೈಕ್ ಟ್ಯಾಕ್ಸಿಗಳು ನಮ್ಮ ವ್ಯವಹಾರಕ್ಕೆ ಅಡ್ಡಿಯಾಗಿವೆ. ನಿಯಮ ಉಲ್ಲಂಘನೆ ಮಾಡಿ ಕಾರ್ಯಾಚರಣೆ ಮಾಡುತ್ತಿರುವ ಬೈಕ್ ಟ್ಯಾಕ್ಸಿಗಳನ್ನು ತಡೆಯಬೇಕು, ಆಟೋಗಳಿಗೆ ಅವಕಾಶ ಕಲ್ಪಿಸಬೇಕು ಎಂದು ವಿನಂತಿ ಮಾಡಿದರು.
ಇದೇ ವಿಚಾರವಾಗಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೂ ಮನವಿ ಪತ್ರ ಸಲ್ಲಿಸಿದ ಆಟೋ ಚಾಲಕ, ಮಾಲೀಕರು ನಗರದಲ್ಲಿ ಬೈಕ್ ಟ್ಯಾಕ್ಸಿ ನಿರ್ಬಂಧ ಮಾಡಲು ಕೋರಿದರು. ಸಂಘದ ಪದಾಧಿಕಾರಿಗಳಾದ ತಿಪ್ಪೇಸ್ವಾಮಿ, ನವೀನ್‌ಕುಮಾರ್, ನವೀನ್‌ಗೌಡ, ಉಪ್ಪಾರಹಳ್ಳಿ ಮಂಜುನಾಥ್, ನವೀನ್ ಮೊದಲಾದವರು ಹಾಜರಿದ್ದರು.