Thursday, March 13, 2025
Google search engine
Homeಮುಖಪುಟ'ಮುಂದಿನ ದಿನಗಳಲ್ಲಿ ಅರ್ಥಶಾಸ್ತ್ರ ಬೋಧಿಸುವವರೇ ಇಲ್ಲದಂತಹ ಪರಿಸ್ಥಿತಿ ಎದುರಾದರೂ ಆಶ್ಚರ್ಯವಿಲ್ಲ'

‘ಮುಂದಿನ ದಿನಗಳಲ್ಲಿ ಅರ್ಥಶಾಸ್ತ್ರ ಬೋಧಿಸುವವರೇ ಇಲ್ಲದಂತಹ ಪರಿಸ್ಥಿತಿ ಎದುರಾದರೂ ಆಶ್ಚರ್ಯವಿಲ್ಲ’

ಇತ್ತೀಚಿಗೆ ಅರ್ಥಶಾಸ್ತ್ರ ವಿಷಯಕ್ಕೆ ನೋಂದಣಿಯಾಗುವ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸಿದೆ. ಅರ್ಥಶಾಸ್ತ್ರ ವಿಜ್ಞಾನ ವಿಷಯಕ್ಕಿಂತಲೂ ಕಠಿಣ. ಅರ್ಥವಾಗಲ್ಲ ಎಂಬ ಮಾತುಗಳು ಸರ್ವೆ ಸಾಮಾನ್ಯವಾಗಿವೆ. ಇದೇ ಪರಿಸ್ಥಿತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಕಾರ್ಯ ಒತ್ತಡ ಇಲ್ಲದೆ ಎಕನಾಮಿಕ್ಸ್ ಬೋಧಿಸುವ ಶಿಕ್ಷಕರು ಕೆಲಸವಿಲ್ಲದೆ ಇರಬೇಕಾದ ಪರಿಸ್ಥಿತಿ ಎದುರಾದರೂ ಆಶ್ಚರ್ಯವಿಲ್ಲ ಎಂದು ಮಂಡ್ಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಶಿವಚಿತ್ತಪ್ಪ ಕಳವಳ ವ್ಯಕ್ತಪಡಿಸಿದರು.

ತುಮಕೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಇಲಾಖೆ, ಸರಕಾರಿ ಪ್ರಥಮದರ್ಜೆ ಕಾಲೇಜು,ಅರ್ಥಶಾಸ್ತ್ರ ವಿಭಾಗ ತುಮಕೂರು, ತುಮಕೂರು ವಿವಿ ಅರ್ಥಶಾಸ್ತ್ರ ಅಧ್ಯಾಪಕರ ಸಂಘದ ಸಹಯೋಗದಲ್ಲಿ ನಡೆದ ‘ಉನ್ನತ ಶಿಕ್ಷಣದಲ್ಲಿ ನಾವಿನ್ಯತೆ’ ಎಂಬ ವಿಷಯ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಹಾಗಾಗಿ ಈಗಲೇ ನಾವು ಎಚ್ಚೆತ್ತುಕೊಂಡು, ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಬೇಕು. ಜೊತೆಗೆ ನಾವು ಸಹ ಈ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಬದುಕುಬಲ್ಲೆವು ಎಂಬ ಆತ್ಮಸ್ಥೈರ್ಯವನ್ನು ಹುಟ್ಟು ಹಾಕಬೇಕಿದೆ ಎಂದು ಹೇಳಿದರು.

ಶಿಕ್ಷಣವೆಂಬದು ನಿರಂತರ ಬದಲಾವಣೆಯನ್ನು ಕಾಣುತ್ತಿದೆ. ಬದಲಾವಣೆಗೆ ತಕ್ಕಂತೆ ಪಠ್ಯಕ್ರಮ, ಬೋಧನಾ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಅರ್ಥಶಾಸ್ತ್ರ ವಿಷಯವನ್ನು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಹೆಚ್ಚು ಉಪಯುಕ್ತವನ್ನಾಗಿಸಲು ಅರ್ಥಶಾಸ್ತ್ರ ಉಪನ್ಯಾಸಕರು ಬದಲಾವಣೆಯನ್ನು ಒಪ್ಪಿಕೊಳ್ಳುವ, ಅಪ್ಪಿಕೊಳ್ಳುವ ಅನಿವಾರ್ಯತೆ ಇದೆ ಎಂದು ಹೇಳಿದರು.

ಖಾಸಗಿ ಶಿಕ್ಷಣ ಸಂಸ್ಥೆಗಳು ಒಳ್ಳೆಯ ಮೂಲ ಸೌರ್ಕಯದ ಜೊತೆಗೆ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಮಕ್ಕಳಿಗೆ ವಿಷಯವನ್ನು ಅರ್ಥಮಾಡಿಸುವಂತೆಯೇ ನಾವು ಕೂಡ ಇರುವ ಸೌಲಭ್ಯಗಳನ್ನೇ ಬಳಸಿಕೊಂಡು ಮಕ್ಕಳ ಸ್ನೇಹಿ ಪಠ್ಯಕ್ರಮದ ಮೂಲಕ ಅವರನ್ನು ಪೈಪೋಟಿಯ ಜಗತ್ತಿನಲ್ಲಿ ಈಜುವಂತಹ ಶಿಕ್ಷಣವನ್ನು ನೀಡಬೇಕಾಗಿದೆ ಎಂದರು.

ಹಿರಿಯ ಅರ್ಥಶಾಸ್ತ್ರ ಪ್ರಾಧ್ಯಾಪಕ ಪ್ರೊ.ಬಿ.ರವೀಂದ್ರಕುಮಾರ್ ಮಾತನಾಡಿ, ಇಂದಿನ ವಿಷಯ ಅತ್ಯಂತ ಅರ್ಥಪೂರ್ಣವಾಗಿದೆ. ಹೊಸತನಗಳನ್ನು ಮೈಗೂಡಿಸಿಕೊಳ್ಳದಿದ್ದರೆ ವಿದ್ಯಾರ್ಥಿಗಳನ್ನು ತಲುಪುವುದು ಕಷ್ಟವಾಗಲಿದೆ. ಹೆಚ್ಚುವರಿ ಪಠ್ಯಕ್ರಮ, ಮಾರುಕಟ್ಟೆಯ ಬೇಡಿಕೆ ಅರಿತು ಪಠ್ಯ ಸಿದ್ದಪಡಿಸಿ, ಹೊಸ ಪೀಳಿಗೆಯಲ್ಲಿ ಸುಸ್ಥಿರತೆ ಮತ್ತು ಪರಿಪೂರ್ಣತೆಯನ್ನು ತರಬೇಕಿದೆ. ಜಾತಿಗಿಂತ ಪ್ರತಿಭೆಗೆ ಪ್ರೋತ್ಸಾಹ ನೀಡುವ, ಪೂರ್ವಾಗ್ರಹ ಪೀಡಿತರಾಗದೆ, ವಿದ್ಯಾರ್ಥಿಗಳಿಂದ ಮಾತ್ರ ವಿಧೆಯತೆ ಬಯಸದೆ, ನಾವು ಸಹ ವಿಧೇಯರಾಗಿ ನಡೆದುಕೊಳ್ಳುವುದನ್ನು ರೂಢಿಸಿಕೊಳ್ಳಬೇಕಿದೆ ಎಂದು ಹೇಳಿದರು.

ಸರಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಟಿ.ಡಿ.ವಸಂತ, ತುಮಕೂರು ವಿವಿ ಅಧ್ಯಾಪಕರ ಸಂಘದ ಅಧ್ಯಕ್ಷ ಡಾ.ಜಿ.ತಿಪ್ಪೇಸ್ವಾಮಿ, ತುಮಕೂರು ವಿವಿ ಅರ್ಥಶಾಸ್ತ್ರ ಪರೀಕ್ಷಾ ಮಂಡಳಿ ಅಧ್ಯಕ್ಷ ಗೋವಿಂದರಾಜು ಎನ್, ಐಕ್ಯೂಎಸಿ ಸಂಚಾಲಕ ಹರಿದಾಸ್ ಎಸ್, ಅರ್ಥಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ.ಜಿ.ಕೆ.ನಾಗರಾಜು, ಜಿ.ಕೆ.ಶಿವಲಿಂಗಯ್ಯ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular