ಕಾಂಗ್ರೆಸ್ ಸರ್ಕಾರ ಜನ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಜೆಡಿಎಸ್ ಕಾರ್ಯಕರ್ತರು ತುಮಕೂರಿನ ಪಕ್ಷದ ಕಚೇರಿಯಿಂದ ಡಿಸಿ ಕಚೇರಿವರೆಗೆ ಮೆರವಣಿಗೆ ನಡೆಸಿ ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಅಧ್ಯಕ್ಷ ಆರ್.ಸಿ.ಆಂಜನಪ್ಪ, ಯಾವುದೇ ಅಭಿವೃದ್ಧಿ ಕೆಲಸ ಮಾಡದ ಕಾಂಗ್ರೆಸ್ ಸರ್ಕಾರ, ದಿನಬಳಕೆ ಪದಾರ್ಥಗಳ ಬೆಲೆ ಏರಿಕೆ ಮಾಡಿ ಜನಸಾಮಾನ್ಯರಿಗೆ ಹೊರೆ ಹೇರಿದೆ. ಚುನಾವಣೆ ವೇಳೆ ಘೋಷಿಸಿದ ಐದು ಗ್ಯಾರಂಟಿ ಯೋಜನೆಗಳು ಚುನಾವಣೆ ಗೆಲ್ಲುವ ಅಸ್ತ್ರ ಮಾಡಿಕೊಂಡಿದೆ. ಗ್ಯಾರಂಟಿ ಯೋಜನೆಗಳಿಗಾಗಿ ಎಸ್.ಸಿ, ಎಸ್.ಟಿ. ಸಮುದಾಯದ ಅಭಿವೃದ್ಧಿಗೆ ಬಳಸಬೇಕಾದ ಹಣ ಬಳಸಿಕೊಂಡು ಆ ಸಮುದಾಯಗಳಿಗೆ ಅನ್ಯಾಯ ಮಾಡಿದೆ ಎಂದು ದೂರಿದರು.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದ ಅಭಿವೃದ್ಧಿ ಕೆಲಸ, ಜನಪರ ಕಾರ್ಯಗಳನ್ನು ಮರೆತು ಭ್ರಷ್ಟಾಚಾರದಲ್ಲಿ ತೊಡಗಿದೆ. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಹಾಳಾಗಿದೆ. ಪೊಲೀಸರ ಮೇಲೆಯೇ ದಾಳಿ ಮಾಡುವ ಪ್ರಕರಣಗಳೂ ನಡೆಯುತ್ತಿವೆ. ಜನಸಾಮಾನ್ಯರಿಗೆ ರಕ್ಷಣೆ ಇಲ್ಲದಂತಾಗಿದೆ. ಇಂತಹ ಕೆಟ್ಟ ಸರ್ಕಾರ ತೊಲಗಬೇಕು. ರಾಜ್ಯಪಾಲರು ಸರ್ಕಾರಕ್ಕೆ ಚಾಟಿ ಬೀಸಿ ಸರಿಯಾದ ದಿಕ್ಕಿನಲ್ಲಿ ನಡೆಯಲು ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಇದುವರೆಗೂ ಬಜೆಟ್‌ನಲ್ಲಿ ಘೋಷಿಸಿದ ಕಾರ್ಯಕ್ರಮಗಳು ಕಾಗದದಲ್ಲೇ ಉಳಿದಿವೆ ಹೊರತು ಅನುಷ್ಟಾನಕ್ಕೆ ಬಂದಿಲ್ಲ. ಇದು ಕಾಂಗ್ರೆಸ್ ಆಡಳಿತದ ವೈಖರಿ. ಸರ್ಕಾರದ ದುರಾಡಳಿತದ ವಿರುದ್ಧ ಜನ ಬೇಸತ್ತು ಶಾಪ ಹಾಕುತ್ತಿದ್ದಾರೆ. ಮುಂಬರುವ ಚುನಾವಣೆಗಳಲ್ಲಿ ಜನ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸುತ್ತಾರೆ ಎಂದರು.
ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು ಮಾತನಾಡಿ, ಪದಾರ್ಥಗಳ ಬೆಲೆ ಏರಿಕೆ, ಬಸ್ ಪ್ರಯಾಣ ದರ, ವಿದ್ಯುತ್ ದರ ಏರಿಕೆ ಮಾಡಿರುವ ಕಾಂಗ್ರೆಸ್ ಸರ್ಕಾರದಿಂದ ರಾಜ್ಯದ ಜನರು ಉತ್ತಮ ಆಡಳಿತವನ್ನು ನಿರೀಕ್ಷೆ ಮಾಡುವಂತಿಲ್ಲ, ಎಲ್ಲಾ ರಂಗಗಳಲ್ಲೂ ವಿಫಲವಾಗಿರುವ ಸರ್ಕಾರವನ್ನು ವಜಾ ಮಾಡಿ ರಾಷ್ಟçಪತಿಗಳ ಆಡಳಿತ ಜಾರಿ ಮಾಡಬೇಕುಎಂದು ಮನವಿ ಮಾಡಿದರು.
ಮಾಜಿ ಶಾಸಕ ಪಿ.ಆರ್.ಸುಧಾಕರ ಲಾಲ್, ಜೆಡಿಎಸ್ ರಾಜ್ಯ ಎಸ್ಟಿ ಮೋರ್ಚಾ ಉಪಾಧ್ಯಕ್ಷ ಸೋಲಾರ್ ಕೃಷ್ಣಮೂರ್ತಿ, ಮುಂಡರಾದ ತಿಮ್ಮಾರೆಡ್ಡಿ, ಹೆಚ್.ಡಿ.ಕೆ.ಮಂಜುನಾಥ್, ಧರಣೇಂದ್ರಕುಮಾರ್, ಯೋಗಾನಂದಕುಮಾರ್, ಟಿ.ಎಲ್.ಕುಂಭಯ್ಯ, ಮುದಿಮಡು ರಂಗಶಾಮಯ್ಯ, ಶ್ರೀನಿವಾಸಪ್ರಸಾದ್, ಟಿ.ಹೆಚ್.ಜಯರಾಮ್, ಗಂಗಣ್ಣ, ಪಾವಗಡ ಶ್ರೀರಾಮ್, ಗೋವಿಂದರಾಜು, ಗಣೇಶ್, ಕುಸುಮಾ ಜಗನ್ನಾಥ್, ತಾಹೇರಾ ಕುಲ್ಸಂ, ಲೀಲಾವತಿ, ಕೊರಟಗೆರೆ ಕಾಮರಾಜು, ದೊಡೇರಿ ಬಸವರಾಜು ಇದ್ದರು.