ಮೂವತ್ತು ವರ್ಷಗಳ ಮಾದಿಗರ ಒಳಮೀಸಲಾತಿಗೆ ಸುಪ್ರೀಂಕೋರ್ಟಿನಿಂದ ಅನುಮೋದನೆ ಸಿಕ್ಕರೂ ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರ ಒಳ ಮೀಸಲಾತಿಯನ್ನು ಜಾರಿ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಸಂಸದ ಗೋವಿಂದ ಎಂ ಕಾರಜೋಳ ಆಪಾದಿಸಿದ್ದಾರೆ.
ತುಮಕೂರು ನಗರದ ಎಂಪ್ರೆಸ್ ಕಾಲೇಜು ಸಭಾಂಗಣದಲ್ಲಿ ಕರ್ನಾಟಕ ಮಾದಿಗ ದಂಡೋರ, ಮಾದಿಗ ವಿದ್ಯಾರ್ಥಿ ಯುವ ಪರಿಷತ್ ಆಶ್ರಯದಲ್ಲಿ ಆದಿ ಜಾಂಬವ ಜಯಂತಿ, ಮಾದಿಗ ಸಮುದಾಯದ ವಧು-ವರರ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಆರು ತಿಂಗಳಿನಿಂದ ನಾಗಮೋಹನ್ ಅವರಿಗೆ ಒಳ ಮೀಸಲಾತಿ ಸಾಧಕ ಬಾಧಕಗಳನ್ನ ಅಧ್ಯಯನ ಮಾಡಲು ತಿಳಿಸಿ, ಅವರಿಗೆ ಸರಿಯಾದ ಮಾಹಿತಿಯನ್ನ ಸರಕಾರದ ಕಡೆಯಿಂದ ಒದಗಿಸುತ್ತಿಲ್ಲ. ಸುಖ ಸುಮ್ಮನೆ ವಿಳಂಬ ಮಾಡುತ್ತಾ ಕುಂಟು ನೆಪ ಹೇಳಿ ಮಾದಿಗ ಸಮುದಾಯದ ಬಡ ಮಕ್ಕಳ ಶಿಕ್ಷಣ ಹಾಗೂ ಉದ್ಯೋಗ ಹಾಗೂ ಸರಕಾರಿ ಸೌಲಭ್ಯಗಳನ್ನು ಕಡೆಗಣಿಸಲು ಕುತಂತ್ರ ರೂಪಿಸಿ ಒಳ ಮೀಸಲಾತಿ ಜಾರಿ ಮಾಡುವಲ್ಲಿ ಕಾಂಗ್ರೆಸ್ ಪಕ್ಷ ಒಡಕು ಧ್ವನಿ ಸಮಸ್ಯೆಯನ್ನು ಮುಂದೆ ಇರಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಬಹು ಸಂಖ್ಯಾತರಾದ ಮಾದಿಗ ಸಮುದಾಯಕ್ಕೆ ಸಾಮಾಜಿಕ ನ್ಯಾಯ ನೀಡಬೇಕು ಎಂಬ ದೃಷ್ಟಿಯಿಂದ ಪ್ರಧಾನಿ ನೇರೆಂದ್ರ ಮೋದಿಯವರು ಕಳೆದ ಸಂಸತ್ ಚುನಾವಣೆ ವೇಳೆ ಪಕ್ಕದ ಆಂಧ್ರಪ್ರದೇಶದಲ್ಲಿ ಒಳ ಮೀಸಲಾತಿಯನ್ನು ಜಾರಿ ಮಾಡುತ್ತೇನೆ ಎಂದು ಭರವಸೆ ನೀಡಿ ಮಾದಿಗ ಸಮುದಾಯವನ್ನು ಗೌರವಪೂರ್ವಕವಾಗಿ ನಡೆಸಿಕೊಂಡಿದ್ದಾರೆ. ಪಕ್ಕದ ರಾಜ್ಯದ ಸರಕಾರ ಒಳ ಮೀಸಲಾತಿಯನ್ನು ಜಾರಿ ಮಾಡಿದ್ದರೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಆಂತರಿಕ ರಾಜಕಾರಣದಿಂದಾಗಿ ಒಳ ಮೀಸಲಾತಿ ಜಾರಿ ಮಾಡುವಲ್ಲಿ ಕಾಂಗ್ರೆಸ್ ನಾಯಕರು ಮಾದಿಗ ಸಮುದಾಯದ ಎಂಎಲ್‌ಎ ಸಚಿವರುಗಳು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಶಾಸಕ ಸುರೇಶ್‌ಗೌಡ ಮಾತನಾಡಿ, ಮಾದಿಗ ಸಮುದಾಯದಿಂದ ಮತ ಪಡೆದ ಸಮುದಾಯದ ಜನನಾಯಕರು ಸಮುದಾಯದ ಒಳಿತಿಗೆ ಚಕಾರ ಎತ್ತುತ್ತಿಲ್ಲ. ಈ ಸಮುದಾಯದ ರಾಜಕೀಯ ನಾಯಕರು ಭಯದ ವಾತಾವರಣದಲ್ಲಿ ರಾಜಕೀಯವನ್ನು ಮಾಡುತ್ತಿದ್ದು, ಇವರಂತೆ ಅಂದು ಅಂಬೇಡ್ಕರ್ ಅವರು ಹೆದರದೆ ಸಂವಿಧಾನವನ್ನು ಬರೆಯದೆ ಹೋಗಿದ್ದರೆ ಈ ಸಮುದಾಯದ ಪರಿಸ್ಥಿತಿ ಏನಾಗುತ್ತಿತ್ತು ಎಂಬುದನ್ನು ಅವಲೋಕಿಸಬೇಕು. ಹೋರಾಟ ಹಾದಿಯಲ್ಲಿರುವ ಸಮುದಾಯದ ಮುಖಂಡರು ಜಾಗೃತಿ ಮೂಡಿಸಬೇಕು, ಸಮುದಾಯದ ಮಕ್ಕಳು ಸಮಾಜದ ಮುಂಚೂಣಿಗೆ ಬರಬೇಕು ಅಂಬೇಡ್ಕರ್ ಅವರು ಸಾಧನೆ ಮಾಡಿದ ಆದರ್ಶವನ್ನು ಮೈಗೂಡಿಸಿಕೊಂಡು ಆತ್ಮವಿಶ್ವಾಸದಿಂದ ಯಶಸ್ಸಿನ ಗುರಿಯನ್ನ ತಲುಪಬೇಕು ಎಂದರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ವಿಜಯಲಕ್ಷ್ಮಿ ದೇಶಮಾ£ ಮಾತನಾಡಿ, ಮಾದಿಗ ಸಮುದಾಯದ ತಳಮಟ್ಟದ ಆಂತರ್ಯವನ್ನು ಅರಿತ ಮೋದಿಯವರು ಮಾದಿಗರಿಗೆ ಸಾಮಾಜಿಕ ನ್ಯಾಯ ನೀಡುವಲ್ಲಿ ಯಶಸ್ವಿಯಾಗಿದ್ದು,ನಾವೆಲ್ಲ ಸೇರಿ ಅವರಿಗೆ ಸೂಪರ್ ಪವರ್ ಕೊಟ್ಟರೆ ಮುಂದಿನ ದಿನದಲ್ಲಿ ಸಮುದಾಯದ ಎಲ್ಲರೂ ಕೂಡ ಸುಗಮವಾದ ಜೀವನ ನಡೆಸಬಹುದು ಎಂದು ತಿಳಿಸಿದರು.
ಮಾದಿಗ ವಿದ್ಯಾರ್ಥಿ ಯುವ ಪರಿಷತ್ ರಾಜ್ಯಾಧ್ಯಕ್ಷ ವಿ. ರವಿವರ್ಮ ಮಾತನಾಡಿದರು. ಮಾದಿಗ ದಂಡೋರದ ಸಂಸ್ಥಾಪಕ ರಾಜ್ಯಾಧ್ಯಕ್ಷ ಎಂ.ಶಂಕ್ರಪ್ಪ, ಪ್ರಧಾನ ಕಾರ್ಯದರ್ಶಿ ಆರ್. ಪ್ರಕಾಶ್, ಮಾಜಿ ಶಾಸಕ ಗಂಗಹನುಮಯ್ಯ, ಅಂಜಿನಪ್ಪ, ಯುವ ಮುಖಂಡರಾದ ಪ್ರಕಾಶ್, ನವೀನ್ ಕುಮಾರ್, ಕಿರಣ್ ಕುಮಾರ್ ಇದ್ದರು.