Friday, July 18, 2025
Google search engine
Homeಚಳುವಳಿಕಾಯಂ ಮಾಡಲು ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ ನೀರು ಸರಬರಾಜು ನೌಕರರು

ಕಾಯಂ ಮಾಡಲು ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ ನೀರು ಸರಬರಾಜು ನೌಕರರು

ಮಹಾನಗರ ಪಾಲಿಕೆಯಲ್ಲಿ ಗುತ್ತಿಗೆ ಪದ್ದತಿ ರದ್ದುಪಡಿಸಿ ನೇರ ನೇಮಕಾತಿ, ಸಮಾನ ಕೆಲಸಕ್ಕೆ ಸಮಾನ ವೇತನ, ಖಾಲಿ ಹುದ್ದೆ ಭರ್ತಿ, ಗೃಹ ಭಾಗ್ಯ ಯೋಜನೆ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾ ನೀರು ಸರಬರಾಜು ನೌಕರರ ಸಂಘದ ವತಿಯಿಂದ ನಗರದ ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲಿ ಇಂದಿನಿಂದ ಅನಿರ್ದಿಷ್ಠಾವಧಿ ಮುಷ್ಕರ ಕೈಗೊಳ್ಳಲಾಗಿದೆ.

ಬಿರು ಬೇಸಿಗೆಯ ಝಳ ನೆತ್ತಿ ಸುಡುತ್ತಿದ್ದು, ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುವ ಮುನ್ಸೂಚನೆಗಳು ಕಂಡು ಬರುತ್ತಿರುವ ಬೆನ್ನಲ್ಲೆ ಮಹಾನಗರ ಪಾಲಿಕೆಯ ವಾಲ್‌ಮನ್‌ಗಳ ಮುಷ್ಕರ ನಡೆಸುತ್ತಿರುವುದು ನಗರದ ನಾಗರಿಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಮಹಾನಗರ ಪಾಲಿಕೆಯಲ್ಲಿ 210 ಜನ ವಾಲ್‌ಮನ್‌ಗಳು ನೀರು ಸರಬರಾಜು ನಿರ್ವಹಣೆ ಮಾಡಿಕೊಂಡು ಬರುತ್ತಿದ್ದು, ಇದರೊಂದಿಗೆ ಬುಗುಡನಹಳ್ಳಿ ಕೆರೆ ಮತ್ತು ಪಿ.ಎನ್.ಆರ್.ಪಾಳ್ಯ ಕೆರೆ ಸ್ವಚ್ಛಗೊಳಿಸುವುದು, ಪಿಐಡಿ ನಂಬರ್‌ಗಳನ್ನು ಪ್ರತಿ ಮನೆ ಮನೆಗೂ ಬರೆಯುವುದು ಕಂದಾಯ ವಸೂಲಾತಿ ಮಾಡುವುದು, ಚುನಾವಣಾ ಕಾರ್ಯಕ್ಕೆ ಬಳಸಿಕೊಳ್ಳುವುದು, ಬಿಎಲ್‌ಓ ಕೆಲಸ ನಿರ್ವಹಿಸುವುದು ಸೇರಿದಂತೆ ಇತರೆ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದೇವೆ. ಆದರೂ ನಮ್ಮ ಸೇವೆಯನ್ನು ಖಾಯಂಗೊಳಿಸುತ್ತಿಲ್ಲ ಎಂದು ಮುಷ್ಕರ ನಿರತ ವಾಲ್‌ಮನ್‌ಗಳು ಆಕ್ರೋಶ ಹೊರ ಹಾಕಿದರು.
ಜಿಲ್ಲಾ ನೀರು ಸರಬರಾಜು ನೌಕರರ ಸಂಘದ ಅಧ್ಯಕ್ಷ ಕುಮಾರ್ ಮಾತನಾಡಿ, ಮಹಾನಗರ ಪಾಲಿಕೆಯಲ್ಲಿ ಕಳೆದ 25 ವರ್ಷಗಳಿಂದ ನಿರಂತರವಾಗಿ ನಾಗರಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೀರು ಸರಬರಾಜು ಮಾಡಿಕೊಂಡು ಬರುತ್ತಿದ್ದೇವೆ. 210 ಜನ ನೌಕರರು ಪಂಪ್‌ಹೌಸ್, ವಾಟರ್‌ಮನ್ ಕೆಲಸ ಮಾಡಿಕೊಂಡು ಬರುತ್ತಿದ್ದೇವೆ. ಹಾಗಾಗಿ 210 ಜನರ ಸೇವೆಯನ್ನು ಖಾಯಮಾತಿ ಮಾಡಬೇಕು. ನೇರ ನೇಮಕಾತಿ, ನೇರ ಪಾವತಿ ಮಾಡಬೇಕು. ವಿಶೇಷ ನೇಮಕಾತಿ ಮಾಡಬೇಕು. ಪಾಲಿಕೆಯಲ್ಲಿ ಖಾಲಿ ಇರುವ 110 ನೌಕರರ ಹುದ್ದೆಗೆ ಹಾಲಿ ಕೆಲಸ ಮಾಡುತ್ತಿರುವ ನೌಕರರನ್ನೇ ಭರ್ತಿ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಕಾರ್ಮಿಕರ ಸಹಕಾರ ಸಂಘ ಪ್ರಾರಂಭಿಸಲು ನಮ್ಮ ವಿರೋಧವಿದೆ. ಇದನ್ನು ಕೈಬಿಟ್ಟು ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ವಾಲ್‌ಮನ್ ನೌಕರರಿಗೆ ಗೃಹ ಭಾಗ್ಯ ನೀಡಬೇಕು. ಕಾರ್ಮಿಕರ ಪಿಎಫ್ ಖಾತೆ ಬಾಕಿ ಇರುವ 55 ಲಕ್ಷ ರೂ.ಗಳನ್ನು ತುರ್ತಾಗಿ ಜಮಾ ಮಾಡಬೇಕು ಎಂದು ಆಗ್ರಹಿಸಿದರು.
ಹೈಕೋರ್ಟ್ ಆದೇಶವಿದ್ದರೂ ನೇಮಕಾತಿ ಮಾಡಿಕೊಂಡಿಲ್ಲ. ಆದ್ದರಿಂದ ಉಚ್ಛ ನ್ಯಾಯಾಲಯದ ಆದೇಶದಂತೆ ತುರ್ತಾಗಿ ನಮ್ಮ ಸೇವೆಯನ್ನು ಖಾಯಂ ಮಾಡುವುದು ಸೇರಿದಂತೆ ಇನ್ನಿತರೆ ಬೇಡಿಕೆಗಳನ್ನು ಮುಂದಿಟ್ಟುಕೊAಡು ಹೋರಾಟ ನಡೆಸುತ್ತಿದ್ದೇವೆ. ನಮ್ಮ ಹೋರಾಟದ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಆಗಮಿಸಿ ನಮ್ಮ ಸಮಸ್ಯೆಯನ್ನು ಆಲಿಸುವುದರ ಜತೆಗೆ ಈ ಬಜೆಟ್‌ನಲ್ಲಿ ನೇರ ನೇಮಕಾತಿ, ನೇರ ಪಾವತಿಯ ಘೋಷಣೆ ಮಾಡುವ ಭರವಸೆ ನೀಡಬೇಕು ಎಂದರು.
ನಮ್ಮ ಬೇಡಿಕೆ ಈಡೇರುವವರೆಗೂ ಹಗಲು-ರಾತ್ರಿ ಎನ್ನದೆ ಅನಿರ್ದಿಷ್ಠಾವಧಿ ಮುಷ್ಕರ ನಡೆಸುತ್ತೇವೆ. ನೀರು ಸರಬರಾಜು ಸ್ಥಗಿತಗೊಳಿಸಿದ್ದೇವೆ. ನಗರದ ನಾಗರಿಕರು ನಮ್ಮ ಹೋರಾಟಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಮುಷ್ಕರದಲ್ಲಿ ಸಂಘದ ಉಪಾಧ್ಯಕ್ಷ ನಟರಾಜು, ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಖಜಾಂಚಿ ಚಂದ್ರಯ್ಯ, ನಂದೀಶ್, ಮಂಜುನಾಥ್, ರಮೇಶ್ ಸೇರಿದಂತೆ ಎಲ್ಲ ವಾಟರ್‌ಮನ್‌ಗಳು ಭಾಗವಹಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular