ಓದುಗರನ್ನು ನಲವತ್ತು ವರ್ಷಗಳ ಹಿಂದೆಯೇ ನಿಲ್ಲಿಸಿರುವ ಸಾಂಸ್ಕೃತಿಕ ರಾಜಕಾರಣ ಯಾವುದು? ಇತ್ತೀಚಿಗೆ ನಡೆದ ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ ಮಾರಾಟಗಾರರಿಂದ ಕೇಳಿಬಂದ ಮಾತು. ‘ಎಲ್ಲರೂ ಕುವೆಂಪು, ತೇಜಸ್ವಿ, ದೇವನೂರು, ಭೈರಪ್ಪ ಕೃತಿಗಳನ್ನೇ ಕೇಳುತ್ತಿದ್ದರು’ ಎಂದು.
ಇದಕ್ಕೆ ಸಂಭ್ರಮ ಪಡಬೇಕೋ, ಅಥವಾ ಸಂಕಟಿಸುವುದೋ ಅರಿವಾಗುತ್ತಿಲ್ಲ.
ಮೂವತ್ತು ವರ್ಷಗಳ ಹಿಂದಿನವರು ತಮ್ಮ ಬರಹದ ಮೂಲಕ ಈಗಲೂ ಜೀವಂತವಾಗಿದ್ದಾರೆ.. ಬರಹಕ್ಕೆ ಆ ಶಕ್ತಿ ಇದೆಯೆಂದು ಸಂಭ್ರಮಿಸುವುದೋ..?!
ಅಥವಾ ಈ ಕಾಲದ ಬರಹಗಾರರು ಇನ್ನೂ ಕಾಯಬೇಕು ಎಂಬ ಹೇಳಿಕೆಯನ್ನು ಹೊತ್ತು ತಿರುಗಬೇಕಾ? ಇನ್ನೂ ಮುಂದುವರಿದು ಪೂರ್ಣವಾಗಿ ಆವರಿಸಿರುವ ಓದು-ಬರಹದ ರಾಜಕಾರಣವೇ?
ಅಂದರೆ ಈ ಪಟ್ಟಿಯಲ್ಲಿ ಕೆಲವು ಲೇಖಕರು ಗತಿಸಿದ್ದಾರೆ. ಕೆಲವು ಬರಹಗಾರರ ಕೃತಿಗಳು ಮೂವತ್ತು-ನಲವತ್ತು ವರ್ಷಗಳ ಹಿಂದೆ ಬರೆದವು.. ಓದುಗರು ಅಲ್ಲೇ ಕುಂತಿದ್ದಾರೆಯೇ?
ಆ ಓದುಗರನ್ನು ಅಲ್ಲೇ ಕುಂತವರಂತೆ ಮಾಡಿರುವ ವ್ಯವಸ್ಥೆಯಾದರೂ ಯಾವುದು? ಈ ಎಲ್ಲವೂಗಳ ಹಿಂದಿರುವುದು ಸಾಂಸ್ಕೃತಿಕ ರಾಜಕಾರಣ.
ಈವರೆಗೂ ಓದುಗರನ್ನು ತಲುಪಿಸುವ ರೂಪವೂ ತಪ್ಪಾಗಿದೆ. ಹೊಸ ಓದುಗರನ್ನು ರೂಪಿಸುವುದರ ಜೊತೆಗೆ ಹೊಸ ಬರಹಗಾರರನ್ನು ಓದುಗರಿಗೆ ತಲುಪಿಸುವ ಮಾಧ್ಯಮವೂ ಶಕ್ತಿಯುತವಾಗಿಲ್ಲ.
ಅಂದರೆ ಸಾಹಿತ್ಯ ಓದು ಎಂದರೆ ಅಥವಾ ವಿಚಾರ ಚರ್ಚೆಗಳು ಮೂವತ್ತು -ನಲವತ್ತು ವರ್ಷಗಳ ಹಿಂದಿನ ಬರಹಕ್ಕೆ ನಿಂತು ಬಿಡುತ್ತಿವೆ.
ಇತ್ತೀಚಿನ ಎಲ್ಲಿಯೇ ಉಪನ್ಯಾಸಗಳನ್ನು ಕೇಳಿದರೂ ಅವು ಮೂವತ್ತು ವರ್ಷಗಳ ಹಿಂದೆಯೇ ಸುತ್ತಾಡುತ್ತಿವೆ. ಆ ಚರ್ಚೆ ಉಪನ್ಯಾಸ, ವಿಚಾರ ಸಂಕಿರಣಗಳು ಅಪ್ಪಿತಪ್ಪಿಯೂ ಈ ಕಾಲದ ಬರಹಗಾರರನ್ನು ಒಳಗೊಳ್ಳುವುದಿಲ್ಲ.
ಹೊಸ ಬರಹಗಾರರ ಕೃತಿಗಳು ಮಾರಾಟವಾಗುತ್ತಿಲ್ಲ.. ಚರ್ಚೆಗಳೂ ಆಗುತ್ತಿಲ್ಲ ಎಂದು ಹಪಹಪಿಸುತ್ತೇವೆ. ಆದರೆ ಆ ರೀತಿಯ ರಾಜಕಾರಣ ಹುನ್ನಾರಗಳ ಅರಿವಿದ್ದರೂ ಹಳಹಳಿಕೆ ಮಾತ್ರ ನಿಂತಿಲ್ಲ. ಇದು ಪ್ರತಿ ಹೊಸ ತಲೆಮಾರಿಗೂ ಎದುರಾಗುವ ದೊಡ್ಡ ತೊಡರೇನೋ..?
ಎಷ್ಟೊಂದು ನೀರು ಸಮುದ್ರದತ್ತ ಹರಿದಿದೆ. ಹೊಸ ನೀರು ಮಾತ್ರ ಬೆಟ್ಟಗುಡ್ಡ ಏರಿ ಉಬ್ಬುಸದಿಂದ ಹರಿಯುತ್ತಲೇ ಇದೆ.
ಬರೆಹ- ರವಿಕುಮಾರ್ ನೀ.ಹ. ಲೇಖಕರು


