ಅತ್ಯಂತ ಕುಗ್ರಾಮದಲ್ಲಿ ಹುಟ್ಟಿ, ಯಾವುದೇ ಆಧುನಿಕ ಪರಿಕರಗಳಿಲ್ಲದೆ, ತಾಯಿ, ಅಜ್ಜಿಯಿಂದ ಕಲಿತ ವಿದ್ಯೆಯಿಂದಲೂ ಸಾವಿರಾರು ಹೆರಿಗೆಗಳನ್ನು ಸುಸೂತ್ರವಾಗಿ ಮಾಡಿಸುವ ಮೂಲಕ ಪದ್ಮಶ್ರೀ ಡಾ.ಸೂಲಗಿತ್ತಿ ನರಸಮ್ಮ ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿದ್ದಾರೆ.
ತುಮಕೂರು ನಗರದ ಟೌನ್‌ಹಾಲ್ ಮುಂಭಾಗದಲ್ಲಿರುವ ಪದ್ಮಶ್ರೀ ಡಾ.ಸೂಲಗಿತ್ತಿ ನರಸಮ್ಮ ಪಾರ್ಕಿನಲ್ಲಿ ಹಮ್ಮಿಕೊಂಡಿದ್ದ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ನರಸಮ್ಮ ಭಾವಚಿತ್ರ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಅವರು, ಪದ್ಮಶ್ರೀಯಂತಹ ದೇಶದ ಅತ್ಯುನ್ನತ ಗೌರವಕ್ಕೆ ಪಾತ್ರರಾದ ಡಾ.ಸೂಲಗಿತ್ತಿ ನರಸಮ್ಮ ಅವರ ಹೆಸರನ್ನು ಶಾಶ್ವತವಾಗಿ ಉಳಿಸುವ ನಿಟ್ಟಿನಲ್ಲಿ ಅವರ ಮಗ ಪಾವಗಡ ಶ್ರೀರಾಮ್ ಕೆಲಸ ಮಾಡುತ್ತಿದ್ದಾರೆ ಎಂದರು.
ಎಲೆಮೆರೆಯ ಕಾಯಿಯಂತೆ ತಮ್ಮ ಕಾಯಕದಲ್ಲಿ ತೊಡಗಿದ್ದ ಡಾ.ಸೂಲಗಿತ್ತಿ ನರಸಮ್ಮ ಅವರ ಕೊಡುಗೆಯನ್ನು ಗುರುತಿಸಿ, ಪ್ರಧಾನಿ ನರೇಂದ್ರಮೋದಿ ಅವರು ಪದ್ಮಶ್ರೀ ಪ್ರಶಸ್ತಿ ನೀಡಿ, ಜನಸಾಮಾನ್ಯರು ದೇಶದ ಉನ್ನತ ಪ್ರಶಸ್ತಿಗೆ ಆರ್ಹರು ಎಂದು ತೋರಿಸಿಕೊಟ್ಟಿದ್ದಾರೆ. ನರಸಮ್ಮ ಅವರು ನಂಬಿದ್ದ ದಾರಿಯಲ್ಲಿ ನಾವೆಲ್ಲರೂ ನಡೆಯುವ ಮೂಲಕ ಅವರು ಜನಮಾನಸದಲ್ಲಿ ಉಳಿಯುವಂತೆ ಮಾಡಬೇಕಿದೆ ಎಂದು ತಿಳಿಸಿದರು.
ನಾಟಕ ಅಕಾಡೆಮಿ ಸದಸ್ಯ ಉಗಮ ಶ್ರೀನಿವಾಸ್ ಮಾತನಾಡಿ, ಪದ್ಮಶ್ರೀ ಡಾ.ಸೂಲಗಿತ್ತಿ ನರಸಮ್ಮ ಅವರ ಸಾಧನೆ ವಿಶಿಷ್ಟವಾದುದು, ಪಾವಗಡ ತಾಲೂಕಿನಂತಹ ಸಣ್ಣ ಪ್ರದೇಶದಲ್ಲಿ ಹುಟ್ಟಿ, ತಮ್ಮ ಹಿರಿಯರಿಂದ ಬಂದ ಸೂಲಗಿತ್ತಿ ವೃತ್ತಿ ಮಾಡುವ ಕಾಯಕದಲ್ಲಿ ತೊಡಗಿದ್ದ ನರಸಮ್ಮ ಅವರನ್ನು ಸರಕಾರ ಗುರುತಿಸಿದೆ. ಸಾವಿರಾರು ಮಕ್ಕಳಿಗೆ ಜೀವದಾನ ನೀಡಿರುವ ಅವರ ಕೈಗುಣ ನಿಜಕ್ಕೂ ಮೆಚ್ಚುವಂತಹದ್ದು, ಅವರ ಒಡನಾಟವಿತ್ತು ಎಂಬುದು ಖುಷಿಯ ವಿಚಾರ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆಂಚಮಾರಯ್ಯ ಮಾತನಾಡಿ, ಪದ್ಮಶ್ರೀ ಡಾ.ಸೂಲಗಿತ್ತಿ ನರಸಮ್ಮ ಅವರ ನೆನಪು ಮಾಡಿಕೊಳ್ಳುವ ಮೂಲಕ ಮುಂದಿನ ಪೀಳಿಗೆಗೆ ಅವರನ್ನು ಪರಿಚಯಿಸುವ ಕೆಲಸವನ್ನು ಪಾವಗಡ ಶ್ರೀರಾಮ ಮಾಡುತಿದ್ದಾರೆ. ಅವರ ಆದರ್ಶಗಳನ್ನು ಯುವಜನರು ಮೈಗೂಡಿಸಿಕೊಂಡರೆ, ಸಮಾಜದಲ್ಲಿ ನೀವು ಕೂಡ ಸಾಧನೆಯ ಶಿಖರ ತಲುಪಬಹುದು ಎಂದರು.
ಪಾವಗಡ ಶ್ರೀರಾಮ್ ಮಾತನಾಡಿ,ಪ್ರತಿವರ್ಷ ಶಾಲಾ, ಕಾಲೇಜುಗಳಲ್ಲಿ ನರಸಮ್ಮ ಅವರ ಪುಣ್ಯಸ್ಮರಣೆ ಆಚರಿಸುವುದು ವಾಡಿಕೆ.ಈ ವರ್ಷವೂ ಗುಬ್ಬಿ ವೀರಣ್ಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಅದರ ಪೂರ್ವಭಾವಿಯಾಗಿ ಇಂದು ಪದ್ಮಶ್ರೀ ಡಾ.ಸೂಲಗಿತ್ತಿ ನರಸಮ್ಮ ಅವರ ಭಾವ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದೆ. ಪ್ರಥಮ ಬಹುಮಾನವಾಗಿ 3000 ರೂ, ದ್ವಿತೀಯ ಬಹುಮಾನವಾಗಿ 2000 ರೂ, ತೃತೀಯ ಬಹುಮಾನವಾಗಿ 1000ರೂ ನಗದು ಪುರಸ್ಕಾರದ ಜೊತೆಗೆ, ಸನ್ಮಾನ ಮಾಡಲಾಗುವುದು. ಸ್ಪರ್ಧೆಯಲ್ಲಿ ಪಾಲ್ಗೊಂಡ ಎಲ್ಲಾ ಕಲಾವಿದರಿಗೂ ಪ್ರಶಂಶನಾ ಪತ್ರ ನೀಡಲಾಗುವುದು ಎಂದು ಹೇಳಿದರು.