ಸಹಕಾರ ಸಂಸ್ಥೆಗಳು ಸೈಬರ್ ಕ್ರೈಂ ಬಗ್ಗೆ ಎಚ್ಚರ ವಹಿಸಬೇಕು, ಪೂರಕ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಮುಂಜಾಗ್ರತಾ ಕ್ರಮ ಅನುಸರಿಸಬೇಕು. ಹಣಕಾಸು ಸಂಸ್ಥೆಗಳಿಗೆ ಮುಂದೆ ಸೈಬರ್ ಕ್ರೈಂ ದೊಡ್ಡ ಸವಾಲಾಗಿ ಕಾಡಬಹುದು. ಸಂಘದ ಸಿಬ್ಬಂದಿ ತಂತ್ರಜ್ಞಾನ ಬೆಳೆಸಿಕೊಂಡು, ಸಹಕಾರ ಕ್ಷೇತ್ರದ ಹೊಸ ಕಾನೂನುಗಳನ್ನು ತಿಳಿದುಕೊಂಡು ಕಾರ್ಯನಿರ್ವಹಿಸಿದರೆ ಸಂಸ್ಥೆ ಯಶಸ್ವಿಯಾಗಿ ಮುನ್ನಡೆಯುತ್ತದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.
ತುಮಕೂರು ನಗರದ ಸ್ನೇಹ ಸಂಗಮ ಸೌಹಾರ್ದ ಪತ್ತಿನ ಸಹಕಾರಿ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿದ ಮಾತನಾಡಿದ ಅವರು, ಬ್ಯಾಂಕಿನ ಸೇವಾ ಚಟುವಟಿಕೆಗಳ ಮಾಹಿತಿ ಪಡೆದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಹಕಾರ ಸಂಘಗಳ ವ್ಯವಹಾರವು ನಂಬಿಕೆ, ವಿಶ್ವಾಸದ ಮೇಲೆ ನಡೆಯುತ್ತದೆ. ಇಲ್ಲಿ ಮೋಸ ಮಾಡಲು ಅವಕಾಶಗಳು ಸಾಕಷ್ಟಿವೆ. ಆದರೆ ಜನರ ವಿಶ್ವಾಸಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಸಂಘಗಳ ಸಿಬ್ಬಂದಿ ಹಾಗೂ ಆಡಳಿತ ಮಂಡಳಿಯವರು ಪ್ರಾಮಾಣಿಕತೆ. ದಕ್ಷತೆಯಿಂದ ಕೆಲಸ ಮಾಡಿದರೆ ಸಂಸ್ಥೆ ಬೆಳವಣಿಗೆಯಾಗುತ್ತದೆ ಎಂದರು.
ಸಂಸ್ಥೆಯ ಲಾಭವನ್ನು ಪೋಲು ಮಾಡಬೇಡಿ, ತೆರಿಗೆ ವಿನಾಯಿತಿಯ ಅವಕಾಶಗಳನ್ನು ಬಳಸಿಕೊಂಡು ಆ ಹಣವನ್ನು ಸಂಘದ ಸದಸ್ಯರ ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸಿರಿ. ಮಕ್ಕಳು ವಿದ್ಯಾವಂತರಾಗಿ ಬೆಳೆದರೆ ಸಮಾಜದ ಆಸ್ತಿಯಾಗುತ್ತಾರೆ. ಅವರು ಆ ರೀತಿ ರೂಪುಗೊಳ್ಳಲು ತಾವೂ ಕಾರಣ ಎಂಬ ಹೆಮ್ಮೆ ನಿಮಗಿರುತ್ತದೆ ಎಂದು ಹೇಳಿದರು.
ಸ್ನೇಹ ಸಂಗಮ ಸೌಹಾರ್ದ ಪತ್ತಿನ ಸಹಕಾರಿಯ ಅಧ್ಯಕ್ಷ ಬಿ.ಎಸ್.ಮಂಜುನಾಥ್, ಉಪಾಧ್ಯಕ್ಷ ಹೆಚ್.ಆರ್.ನಾಗೇಶ್, ನಿರ್ದೇಶಕರಾದ ಟಿ.ಎಸ್.ನಳಿನಾ, ಟಿ.ಬಿ.ಮೃತ್ಯುಂಜಯ, ಹೆಚ್.ಎನ್.ಶಿವಕುಮಾರ್, ಪ್ರಭಾಕರ್, ಕೆ.ಎಸ್.ಸುರೇಶ್, ಓ.ಕೆ.ಅರುಣ್‌ಕುಮಾರ್, ಟಿ.ಎನ್.ಪೃಥ್ವಿಪ್ರಸಾದ್, ಟಿ.ಶಾಂತಕುಮಾರಿ, ಟಿ.ಎಸ್.ಲೋಕೇಶ್‌ಕುಮಾರ್, ಟಿ.ಎಸ್.ಚಿದಾನಂದ್, ಡಾ.ಡಿ.ಎಸ್.ಸುರೇಶ್, ಟಿ.ಎಸ್.ಜಗದೀಶ್, ಹೆಚ್.ಎಸ್.ಸಿದ್ದರಾಜು, ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಎಸ್.ಮಂಜುನಾಥ್ ಮೊದಲಾದವರು ಭಾಗವಹಿಸಿದ್ದರು.


