Thursday, November 21, 2024
Google search engine
Homeಮುಖಪುಟಎಕ್ಸ್ ಪ್ರೆಸ್ ಕೆನಾಲ್ ಕಾಮಗಾರಿ ಪುನರಾರಂಭಕ್ಕೆ ವಿರೋಧ

ಎಕ್ಸ್ ಪ್ರೆಸ್ ಕೆನಾಲ್ ಕಾಮಗಾರಿ ಪುನರಾರಂಭಕ್ಕೆ ವಿರೋಧ

ಹೇಮಾವತಿ ಎಕ್ಸ್ ಪ್ರೆಸ್ ಕೆನಾಲ್ ಕಾಮಗಾರಿ ಪುನರಾರಂಭವನ್ನು ವಿರೋಧಿಸಿ ಬುಧವಾರ ಮಾಜಿ ಸಚಿವ ಸೊಗಡು ಶಿವಣ್ಣ ಹಾಗೂ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ನೇತೃತ್ವದಲ್ಲಿ ತುಮಕೂರಿನ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಸೊಗಡು ಶಿವಣ್ಣ, ಕುಣಿಗಲ್ ತಾಲೂಕಿಗೆ ಹಂಚಿಕೆಯಾಗಿರುವ ನೀರು ತೆಗೆದುಕೊಂಡು ಹೋಗಲು ನಮ್ಮ ಅಭ್ಯಂತರವಿಲ್ಲ. ಆದರೆ ಮೂಲ ನಾಲೆಗೆ ಧಕ್ಕೆಯಾಗದಂತೆ ತೆಗೆದುಕೊಂಡು ಹೋಗಬೇಕು. ಇದು ನಮ್ಮ ಆಗ್ರಹವಾಗಿದೆ. ಈ ಹಿಂದೆ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿಸಿ ಪ್ರತಿಭಟನೆಗಳು ನಡೆದಾಗ ಸರಕಾರ ತಾಂತ್ರಿಕ ಸಮಿತಿ ನೇಮಿಸಿ ವರದಿ ಬಂದ ನಂತರ ಸಾಧಕ, ಬಾಧಕಗಳನ್ನು ಚರ್ಚಿಸಲಾಗುವುದು ಎಂದು ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ ಹೋರಾಟವನ್ನು ಹಿಂಪಡೆಯಲಾಗಿತ್ತು. ತಾಂತ್ರಿಕ ವರದಿಯನ್ನು ಕತ್ತಲಲ್ಲಿ ಇಟ್ಟು ಕಾಮಗಾರಿ ನಡೆಸಲು ಹೊರಟಿರುವುದು ಸರಿಯಲ್ಲ. ಜಿಲ್ಲಾಡಳಿತ ಕೂಡಲೇ ಸಂಬಂಧಪಟ್ಟವರಿಗೆ ಸೂಚನೆ ನೀಡಿ, ಕಾಮಗಾರಿ ತಡೆಯಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

ಬಿಜೆಪಿ ಮುಖಂಡ ದಿಲೀಪ್ ಕುಮಾರ್ ಮಾತನಾಡಿ, ತಾಂತ್ರಿಕ ಸಲಹಾ ಸಮಿತಿಯ ವರದಿ ಬಗ್ಗೆ ಚರ್ಚೆಯಾಗಿ ಇದರ ಬಗ್ಗೆ ನಿರ್ಧಾರಗಳು ಆಗುವವರೆವಿಗೂ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಯನ್ನು ಕೂಡಲೇ ನಿಲ್ಲಿಸುವಂತೆ ಡಿಸಿ ಸಂಬಂಧಪಟ್ಟ ಇಲಾಖೆಯವರಿಗೆ ಆದೇಶಿಸಬೇಕು. ಇದು ಕಾರ್ಯರೂಪಕ್ಕೆ ಬರದಿದ್ದಲ್ಲಿ ನಮ್ಮ ಹೋರಾಟವು ತೀವ್ರ ಸ್ವರೂಪ ಪಡೆದು ಶಾಶ್ವತವಾಗಿ ಹೆದ್ದಾರಿ ಬಂದ್ ಪುನಃ ಜಿಲ್ಲಾ ಬಂದ್ ಹಾಗೂ ಶಾಲಾ ಕಾಲೇಜ್‌ಗಳ ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಸರ್ಕಾರದ ಹಣವನ್ನು ಇವರಿಗೆ ಹೇಗೆ ಬೇಕೋ ಹಾಗೆ ವ್ಯಯ ಮಾಡುತ್ತಿದ್ದಾರೆ. ಆದ್ದರಿಂದ ನಮ್ಮ ಭಾಗದ ರೈತರನ್ನು ಕರೆದು ಚರ್ಚೆ ಮಾಡಿ ವಿಮರ್ಶೆ ನಡೆಸಿದ ನಂತರ ಈ ಯೋಜನೆಯನ್ನು ಏನು ಮಾಡಬೇಕು ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದರು.

ಚಾನಲ್‌ನ 3 ರಿಂದ 5 ಅಡಿ ಡೌನ್ ಆಗಿ ಡಿಸೈನ್ ಮಾಡಿರುವುದರಿಂದ ಸಂಪೂರ್ಣ ನೀರು ಹರಿಯುತ್ತದೆ. ಹಾಗಾಗಿ ನಮ್ಮ ಹೋರಾಟವನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಜಿಲ್ಲಾಡಳಿತ ಮಧ್ಯೆ ಪ್ರವೇಶಿಸಿ ಇದರ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸಬೇಕು, ಈ ಭಾಗದ ರೈತರ ಅಹವಾಲು ಆಲಿಸಬೇಕು ಎಂದು ಒತ್ತಾಯಿಸಿದರು.

ರೈತ ಸಂಘದ ಅಧ್ಯಕ್ಷ ಎ.ಗೋವಿಂದರಾಜು ಮಾತನಾಡಿ, ಸರಕಾರ, ಜಿಲ್ಲಾಡಳಿತ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು. ತಾಂತ್ರಿಕ ಸಮಿತಿಯ ವರದಿಯನ್ನು ಸಾರ್ವಜನಿಕ ಚರ್ಚೆಗೆ ಒಳಪಡಿಸಬೇಕು. ವರದಿಯನ್ನು ಬಹಿರಂಗಪಡಿಸದೆ ಕಾಮಗಾರಿ ನಡೆಸುವುದು ತರವಲ್ಲ. ಅಲ್ಲದೆ ಯಾವುದೇ ಭೂ ಸ್ವಾಧೀನವಿಲ್ಲದೆ ರಸ್ತೆಯ ಪಕ್ಕ, ಕೆರೆಗಳ ಏರಿಗಳ ಮೇಲೆ ಪೈಪ್‌ಲೈನ್ ಕಾಮಗಾರಿ ನಡೆಸುತ್ತಿರುವುದು ಖಂಡನೀಯ. ರೈತರನ್ನು ಕತ್ತಲಲ್ಲಿ ಇಟ್ಟು ಕಾಮಗಾರಿ ನಡೆಸಲು ಮುಂದಾದರೆ, ಮುಂದಾಗುವ ಅನಾಹುತಗಳಿಗೆ ಜಿಲ್ಲಾಡಳಿತವೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಕಾರ್ಯದರ್ಶಿ ಬಸವರಾಜು, ಚಿಕ್ಕಬೋರೇಗೌಡ, ರವೀಶ್, ಹೆಚ್.ಟಿ.ಭೈರಪ್ಪ, ಸಾಗರನಹಳ್ಳಿ ವಿಜಯಕುಮಾರ್, ಕಳ್ಳಿಪಾಳ್ಯ ಲೋಕೇಶ್, ವೆಂಕಟಾಚಲ, ಟಿ.ಹೆಚ್. ಭೈರಪ್ಪ, ನಟರಾಜು, ಕೆ.ಪಿ.ಮಹೇಶ್, ನಂಜೇಗೌಡ, ದಸಂಸ ಮುಖಂಡ ಪಿ.ಎನ್.ರಾಮಯ್ಯ, ಜಿ.ಪಂ. ಮಾಜಿ ಸದಸ್ಯೆ ಯಶೋಧಮ್ಮ, ಜಗದೀಶ್ ಇತರರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular