ಪ್ರಾಣದ ಹಂಗನ್ನು ತೊರೆದು ಸದಾ ಕಾರ್ಯನಿರ್ವಹಿಸುವ ಪೊಲೀಸರ ಸೇವೆ ಶ್ಲಾಘನೀಯ ಎಂದು ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಿ. ಜಯಂತಕುಮಾರ್ ಹೇಳಿದರು.
ತುಮಕೂರು ನಗರದ ಎಸ್‌ಪಿ ಕಚೇರಿಯ ಆವರಣದಲ್ಲಿ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಹುತಾತ್ಮ ಪೊಲೀಸರ ಸ್ಮಾರಕದ ಪುತ್ಥಳಿಗೆ ಪುಷ್ಪಗುಚ್ಛ ಇರಿಸಿ ಗೌರವ ಸಲ್ಲಿಸಿ ಅವರು ಮಾತನಾಡಿದರು.
ದೇಶದಲ್ಲಿ ನಾವು ರಾತ್ರಿ ವೇಳೆ ನೆಮ್ಮದಿಯಾಗಿ ನಿದ್ದೆ ಮಾಡುತ್ತಿದ್ದೇವೆ ಎಂದರೆ ಅದಕ್ಕೆ ಪೊಲೀಸರ ಸೇವೆಯೇ ಕಾರಣ. ಪೊಲೀಸರು ದೇಶಕ್ಕಾಗಿ, ಸಮಾಜಕ್ಕಾಗಿ ದಿನದ 24 ಗಂಟೆಯೂ ಸಾಕಷ್ಟು ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಕೆಲ ಸಂದರ್ಭದಲ್ಲಿ ತಮ್ಮ ಪ್ರಾಣದ ಹಂಗನ್ನು ತೊರೆದು ಕಾರ್ಯನಿರ್ವಹಿಸುವ ಸನ್ನಿವೇಶಗಳು ಎದುರಾಗುತ್ತವೆ ಎಂದರು.
ದೇಶ ಮತ್ತು ಸಮಾಜದ ರಕ್ಷಣೆಗಾಗಿ ಪ್ರತಿ ಕ್ಷಣವೂ ಸೇವೆ ಸಲ್ಲಿಸುತ್ತಿರುವ ಪೊಲೀಸರ ಕಾರ್ಯವನ್ನು ನಾವೆಲ್ಲರೂ ಸ್ಮರಿಸಬೇಕು. ಒಮ್ಮೊಮ್ಮೆ ತಮ್ಮ ಕುಟುಂಬದ ಹಿತವನ್ನು ಬದಿಗೊತ್ತಿ ಸಮಾಜದ ರಕ್ಷಣೆ ಮಾಡುವ ಪೊಲೀಸರ ಸೇವೆ ಶ್ಲಾಘನೀಯ ಎಂದರು.
ಬೆಳಿಗ್ಗೆಯೇ ಸುರಿಯುವ ಮಳೆಯಲ್ಲೂ ಹುತಾತ್ಮ ಪೊಲೀಸರಿಗೆ ಗೌರವ ಸಮರ್ಪಿಸುತ್ತಿರುವುದು ಪೊಲೀಸ್ ಇಲಾಖೆ ಶಿಸ್ತಿನ ಇಲಾಖೆ ಎಂಬುದು ಮತ್ತೊಮ್ಮೆ ಸಾಬೀತಾಗುತ್ತಿದೆ ಎಂದು ಹೇಳಿದರು.
ಪ್ರಾಸ್ತಾವಿಕ ಮಾತನಾಡಿದ ಎಸ್‌ಪಿ ಅಶೋಕ್, ನಮ್ಮ ದೇಶದ ಉತ್ತರದ ಗಡಿ ಭಾಗವು ವರ್ಷವಿಡೀ ಹಿಮದಿಂದ ಆವೃತವಾಗಿರುವ ದುರ್ಗಮ ಪ್ರದೇಶವಾಗಿದೆ. ಇಂತಹ ಸಂದರ್ಭದಲ್ಲಿ 1959 ರ ಅ. 21 ರಂದು ಬೆಳಿಗ್ಗೆ 8 ಗಂಟೆ ಸಮಯದಲ್ಲಿ ಕರಣ್‌ಸಿಂಗ್ ಎಂಬ ಡಿವೈಎಸ್ಪಿ ಅವರ ನಾಯಕತ್ವದಲ್ಲಿ ಸಿಆರ್‌ಪಿ ತಂಡದವರು ನಮ್ಮ ದೇಶದ ಗಡಿ ಭಾಗದ ಲಡಾಕ್ ಎಂಬಲ್ಲಿ ಕಾವಲು ಕಾಯುತ್ತಿರುವಾಗ ಚೀನಾ ದೇಶದ ಅಸಂಖ್ಯಾತ ಸೈನಿಕರು ನಮ್ಮ ದೇಶದ ಗಡಿ ಭಾಗದಲ್ಲಿ ಒಳನುಗ್ಗಿದರು. ಅಲ್ಲಿದ್ದ ನಮ್ಮ ಸೈನಿಕರು ದೇಶದ ರಕ್ಷಣೆಗಾಗಿ ಕೊನೆಯ ಹನಿ ರಕ್ತ ಇರುವವರೆಗೂ ಅಪ್ರತಿಮವಾಗಿ ಹೋರಾಡಿ ವೀರ ಮರಣ ಹೊಂದಿದರು ಎಂದು ಸ್ಮರಿಸಿದರು.
ಈ ಬಾರಿ ತುಮಕೂರು ಜಿಲ್ಲೆಯ ಕೊಡಿಗೇನಹಳ್ಳಿ ಪೊಲೀಸ್ ಠಾಣೆಯ ಮಹೇಶ್ ಜಿ.ವಿ. ಸೇರಿದಂತೆ ಕರ್ನಾಟಕದಲ್ಲಿ 5 ಮಂದಿ ಕರ್ತವ್ಯನಿರತ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಹುತಾತ್ಮರಾಗಿದ್ದಾರೆ ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಎಎಸ್‌ಪಿಗಳಾದ ಮರಿಯಪ್ಪ, ಅಬ್ದುಲ್ ಖಾದರ್. ಕೆಎಸ್‌ಆರ್‌ಪಿ ಕಮಾಂಡೆಂಟ್ ಸತ್ಯನಾರಾಯಣ ಸೇರಿದಂತೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ಪೊಲೀಸ್ ಅಧಿಕಾರಿಗಳು, ನಿವೃತ್ತ ಪೊಲೀಸರು ಇದ್ದರು.