ಕೋಟಿ ಕೋಟಿ ದಾಟಿ,
ಎಡಗೈ ಬಲಗೈಗೆ, ಬಲಗೈ ಎಡಗೈಗೆ
ಒಡ್ಡಿರುವ ಪೈಪೋಟಿ
ಇಂಡಿಯವ್ವ ಓ ಇಂಡಿಯವ್ವ.
ಏಳು ಕೋಟಿಗೂ ಮಿಗಿಲು
ಏಳು ಸುತ್ತಿನ ಕೋಟೆ
ಕಬಂಧ ಬಾಹುಗಳ ಕವಲು
ತಬ್ಬಿದೆ ಪ್ರಬುದ್ಧ ಕರುನಾಡು.
ಅಂತರಂಗ ಪ್ರಬಲ
ಬಹಿರಂಗ ದುರ್ಬಲ
ಎರಡು ಕೈ, ಎರಡು ಕಾಲು
ಊನವಾದ ಜೀವ
ಕಾಲಿಗೆ ಕಟ್ಟಿದ ಗುಂಡು
ಕೈಗೆ ಕಟ್ಟಿದ ಬೆಂಡು
ಈಜಲೂ ಆಗದೆ
ಮುಳುಗಲೂ ಆಗದೆ
ಕಾಲುಗಳು ಒಳಗೆ
ಕೈಗಳು ಹೊರಗೆ
ಹಾಕುತ್ತಿವೆ ದೊಂಬರಲಾಗ.
ಬಲಗೈ ಹೆಬ್ಬೆರಳು ಬಲಿಕೊಟ್ಟ ಏಕಲವ್ಯನ ನೆನೆದು
ಟೊಂಕ ಕಟ್ಟಿ ನಿಂತಿದೆ ಎಡಗೈ
ನೂರೊಂದು ಸೋದರರ
ಉಳಿವಿಗಾಗಿ, ಗೆಲುವಿಗಾಗಿ.
ಎಡಗೈ ಕುರುಡ
ಬಲಗೈ ಕುಂಟ
ಭಿಕ್ಷೆಗೆ ಹೊರಟರು ಹೆದ್ದಾರಿಗುಂಟ
ಕುರುಡ ಬೇಡಿದ
ಕುಂಟ ನಡೆಸಿದ
ದಿನದ ಕೊನೆಯ ಲೆಕ್ಕಾಚಾರ
ನೂರು ರೂಪಾಯಿ ಒಟ್ಟುಗೂಡಿತ್ತು.
ಕುಂಟ ಕುರುಡನಿಗೆ
ಲೆಕ್ಕ ಒಪ್ಪಿಸಿದ
ಇಪ್ಪತ್ತೊಂದು ರೂಪಾಯಿ
ಒಟ್ಟುಗೂಡಿತೆಂದು.
ಕೊಂಚವೂ ಇಲ್ಲ ಪಶ್ಚಾತ್ತಾಪ
ಪ್ರತಿದಿನದ ಈ ವಂಚನೆಗೆ
ದಾರಿ ಸಾಗಿದೆ, ಓಡುವವ ಬೆತ್ತಲೆ ಓಡಿಸುವವ ಬೆತ್ತಲೆ.
ಸದಾಶಿವನ ಮಹಿಮೆಯಿಂದ
ಕುರುಡನಿಗೆ ಕಣ್ಣು ಬಂದಿದೆ
ಕುಂಟನ ಕಾಲು ನೆಟ್ಟಗಾಗಿವೆ
ಬೇಕು ಅಂತರಂಗದ ಬೆಸುಗೆ
ದಾರಿ ತಪ್ಪಿದ್ದ ಇಬ್ಬರಲಿ.
ನ್ಯಾಯದ ಕಟ್ಟೆ ನ್ಯಾಯಾಧೀಶ
ರಾಜ್ಯಗಳತ್ತ ಬೊಟ್ಟು ಮಾಡಿ
ನ್ಯಾಯದಾನ ಮಾಡಿಬಿಟ್ಟ
ಪಕ್ಷಗಳು ಹೊಂಚು ಹಾಕಿ
ಕಾಯುತ್ತಿವೆ ಕ್ರೆಡಿಟ್ಟಿಗಾಗಿ.
ಮೂರು ದಶಕಗಳ ಚಳವಳಿಯ ನೆನೆದು
ಕಣ್ಣುಗಳು ಒದ್ದೆಯಾಗಿವೆ.
ಚಳವಳಿ ಸಖರು ಸಂಭ್ರಮದಲ್ಲಿ
ಸಿಹಿ ತಿನಿಸಿ ತೇಲುತ್ತಾರೆ.
ಜಾರಿ ಮಾಡೋ ರಾಯಭಾರಿ
ಕಮಲ ಹೊತ್ತ ಮಹಿಳೆಯ
ಸಂಚಿಗೆ ಬಲಿಯಾಗಿ
ಮೂಡದಲ್ಲಿ ಮುಳುಗಿ
ಮೂಡ್ ಔಟ್ ಹಾಗಿದ್ದರೆ.
ಎಂದಿಗಣ್ಣ ಜಾರಿಗೆ
ಎಂದಿಗಣ್ಣ ಜಾರಿಗೆ.
ಡಾ.ಶಿವಣ್ಣ ತಿಮ್ಲಾಪುರ, ಅಧ್ಯಾಪಕರು
(ದಸರಾ ಕವಿಗೋಷ್ಠಿಯಲ್ಲಿ ವಾಚನ ಮಾಡಿದ ಕವನ)