ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಯಾಗಿದ್ದು, ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಸೋಲಿಗೆ ಪ್ರಮುಖ ಕಾರಣವಾಗಿದ್ದರೂ, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಎಡವಿದ್ದು ಎಲ್ಲಿ? ಎಂಬ ಸೋಲಿನ ಪರಾಮರ್ಶೆಯನ್ನು ಮಾಡಿಕೊಂಡು, ಮುಂದೆ ಇಂತಹ ತಪ್ಪುಗಳು ಆಗದಂತೆ ಎಚ್ಚರಿಕೆ ವಹಿಸಬೇಕಾದ ಅನಿವಾರ್ಯತೆ ಇದೆ ಎಂದು ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಘೋರ್ಪಡೆ ತಿಳಿಸಿದ್ದಾರೆ.
ತುಮಕೂರು ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ 2024ರ ಲೋಕಸಭಾ ಚುನಾವಣೆಯ ಸೋಲಿನ ಪರಾಮರ್ಶೆ ನಡೆಸಲು ಆಗಮಿಸಿದ್ದ ವಿನಯಕುಮಾರ್ ಸೊರಕೆ ನೇತೃತ್ವದ ಸತ್ಯಶೋಧನಾ ಸಮಿತಿಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾವು ಈ ಹಿಂದೆ 2019ರಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದೆವು.ಆದರೆ ಹುಟ್ಟಿನಿಂದಲೂ ಸಾಂಪ್ರದಾಯಕ ಎದುರಾಳಿಗಳಾಗಿರುವ ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರು ಒಂದಾಗುವುದು ಕಷ್ಟವಾದ ಕಾರಣ ಒಳ್ಳೆಯ ಫಲಿತಾಂಶ ಪಡೆಯಲಾಗಲಿಲ್ಲ.ಆದರೆ ಜೆಡಿಎಸ್-ಬಿಜೆಪಿ ಮೈತ್ರಿಯಲ್ಲಿ ಬಿಜೆಪಿಗಿಂತಲೂ ಜೆಡಿಎಸ್ ಹೆಚ್ಚು ಕೆಲಸ ಮಾಡಿದ್ದರ ಪರಿಣಾಮ ಬಿಜೆಪಿಗೆ ಲಾಭವಾಗಿದೆ. ಆದರೆ ಇದನ್ನು ಮರೆತು ಕಾಂಗ್ರೆಸ್ ಕಾರ್ಯಕರ್ತರು ಮುಂದಿನ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಸಕ್ರಿಯವಾಗಿ ಪಕ್ಷದ ಚುನಾವಣೆಗಳಲ್ಲಿ ಪಾಲ್ಗೊಳ್ಳಬೇಕಿದೆ. ಆಗ ಮಾತ್ರ ನಮ್ಮ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಲು ಸಾಧ್ಯ ಎಂದರು.
ಬಿಜೆಪಿ, ಹಿಂದುತ್ವ, ರಾಮಮಂದಿರದ ಹೆಸರಿನಲ್ಲಿ ಚುನಾವಣೆ ಎದುರಿಸಿದ್ದರೂ ಜನರು ಒಪ್ಪದ ಕಾರಣ, ವಿವಿಧ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡು ನೂರು ದಿನ ಕಳೆಯುವುದರೊಳಗೆ ಎಲ್ಲವೂ ಸರಿಯಿಲ್ಲ ಎಂಬುದು ಸಾಬೀತಾಗಿದೆ. ಬಿಜೆಪಿ ಜಾರಿಗೆ ತರಬೇಕಿದ್ದ ಹಲವು ಮಸೂದೆಗಳು ಕಡತದಲ್ಲಿಯೇ ಉಳಿದಿವೆ. ಜನರಿಗೆ ನಿಧಾನಕ್ಕೆ ಬಿಜೆಪಿಯ ಕುತಂತ್ರಗಳು ಅರ್ಥವಾಗುತ್ತಿವೆ. ಹಾಗಾಗಿ ಜನಪರವಾಗಿರುವ ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚು ಸಕ್ರಿಯರಾಗುವಂತೆ ಘೋರ್ಪಣೆ ಸಲಹೆ ನೀಡಿದರು.
ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ಜಿಲ್ಲೆಯ ಮಟ್ಟಿಗೆ ಜೆಡಿಎಸ್-ಕಾಂಗ್ರೆಸ್ ಪ್ರಬಲ ಎದುರಾಳಿಗಳು,ಮುಖಂಡರು, ಕಾರ್ಯಕರ್ತರು ಒಗ್ಗೂಡದ ಕಾರಣ 2019ರಲ್ಲಿ ದೇವೇಗೌಡರಿಗೆ ಸೋಲಾಯಿತು. ಆದರೆ 2024ರಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಯಲ್ಲಿ ಜೆಡಿಎಸ್ ಹೆಚ್ಚು ಸಕ್ರಿಯವಾಗಿ ಚುನಾವಣೆಯಲ್ಲಿ ತೊಡಗಿಕೊಂಡ ಪರಿಣಾಮ ಬಿಜೆಪಿ ಅಭ್ಯರ್ಥಿಗೆ ಗೆಲುವಾಗಿದೆ. ಆಗಿರುವುದನೆಲ್ಲಾ ಮರೆತು ಮುಂದಿನ ಚುನಾವಣೆಗಳನ್ನು ಎದುರಿಸಬೇಕಾಗಿದೆ. ಲೋಕಸಭಾ ಚುನಾವಣೆಯ ಸೋಲಿನ ಆತ್ಮವಿಮರ್ಶೆಯ ಜೊತೆ ಜೊತೆಗೆ, ಜಿ.ಪಂ., ತಾ.ಪಂ. ಚುನಾವಣೆಗಳಲ್ಲಿ ಹೆಚ್ಚು ಸೀಟುಗಳನ್ನು ಗೆಲ್ಲಬೇಕಾಗಿದೆ. ಈ ನಿಟ್ಟಿನಲ್ಲಿ ಕಾರ್ಯಕರ್ತರು ಸಜ್ಜಾಗುವಂತೆ ಸಲಹೆ ನೀಡಿದರು.
ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ,ಒಂದು ಪಕ್ಷದ ಅಭ್ಯರ್ಥಿ ಸೋತಾಗ, ಸೋಲಿನ ಕಾರಣ ಏನು ಎಂದು ತಿಳಿದುಕೊಳ್ಳುವುದು ಮುಖ್ಯ. ಈ ನಿಟ್ಟಿನಲ್ಲಿ ವಿನಯಕುಮಾರ್ ಸೊರಕೆ, ಮತ್ತು ಘೋರ್ಪಡೆ ಅವರು ತುಮಕೂರು ಜಿಲ್ಲೆಗೆ ಆಗಮಿಸಿದ್ದಾರೆ. ಅವರ ಮುಂದೆ ಕಾರ್ಯಕರ್ತರು ತಮ್ಮ ಅಭಿಪ್ರಾಯವನ್ನು ತಿಳಿಸಬೇಕು.ಕಾಂಗ್ರೆಸ್‌ನ್ನು ಲೀಡರ್ ಬೇಸ್ ನಿಂದ ಕೇಡರ್ ಬೆಸ್‌ಗೆ ಬದಲಾಯಿಸಬೇಕಾಗಿದೆ. ಪಕ್ಷಕ್ಕೆ ಕಾರ್ಯಕರ್ತರೇ ಶಕ್ತಿ. ಅವರನ್ನು ಹುರುದುಂಬಿಸುವ ಕೆಲಸ ಆಗಬೇಕು. ಆಗ ಮಾತ್ರ ಮುಂದಿನ ಚುನಾವಣೆಗಳಲ್ಲಿ ನಿರೀಕ್ಷಿತ ಫಲಿತಾಂಶ ಪಡೆಯಲು ಸಾಧ್ಯ. ಪಕ್ಷದಲ್ಲಿ ಚುನಾವಣೆಗೆ ಸ್ಪರ್ಧಿಸಲು ಟಿಕೇಟ್ ಕೇಳುವವರಿಗೆ ಕಡಿಮೆ ಇಲ್ಲ. ಆದರೆ ಗೆಲ್ಲುವ ವ್ಯಕ್ತಿ ಯಾರು ಎಂಬುದು ಮುಖ್ಯ.ಗ್ರಾ.ಪಂ.ಚುನಾವಣೆ ಎದುರಿಸಲಾಗದವರಿಗೆ ಲೋಕಸಭೆ ಟಿಕೇಟ್ ನೀಡಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಅಸೂಯೆ, ವಯುಕ್ತಿಕ ದ್ವೇಷವನ್ನು ಮುಖಂಡರು ಬದಿಗೊತ್ತಿದರೆ ಜಿಲ್ಲೆಯಲ್ಲಿ ಪಕ್ಷವನ್ನು ಬಲವಾಗಿ ಕಟ್ಟಲು ಸಾಧ್ಯ.ಜಿಲ್ಲೆಯಲ್ಲಿ ಪಕ್ಷದ ವರ್ಚ್ಚಸು ಕುಸಿದಿಲ್ಲ. ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಆಗಬೇಕಾಗಿದೆ ಎಂದರು.
ಮಾಜಿ ಸಚಿವರು, ಬೆಂಗಳೂರು ವಿಭಾಗ ಸತ್ಯ ಶೋಧನಾ ಸಮಿತಿಯ ಅಧ್ಯಕ್ಷ ವಿನಯಕುಮಾರ್ ಸೊರಕೆ ಮತ್ತು ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಘೋರ್ಪಡೆ ನೇತೃತ್ವದ ಸತ್ಯ ಶೋಧನಾ ಸಮಿತಿ ತುಮಕೂರು ಜಿಲ್ಲೆಯ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರಿಂದ ಪ್ರತ್ಯೇಕವಾಗಿ 2024 ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಸೋಲಿಗೆ ಕಾರಣಗಳೇನು ಎಂಬ ಮಾಹಿತಿಯನ್ನು ಕಲೆ ಹಾಕಿತು.
ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ ಅಧ್ಯಕ್ಷ ಚಂದ್ರಶೇಖರಗೌಡ, ಮಾಜಿ ಶಾಸಕ ಗಂಗಹನುಮಯ್ಯ, ರಾಮಕೃಷ್ಣ, ಮುರುಳೀಧರ ಹಾಲಪ್ಪ,ಮಾಜಿ ಶಾಸಕ ಡಾ.ರಫೀಕ್ ಅಹಮದ್, ಇಕ್ಬಾಲ್ ಅಹಮದ್, ಷಣ್ಮುಖಪ್ಪ,ಯೂತ್ ಕಾಂಗ್ರೆಸ್ ಅಧ್ಯಕ್ಷ ಶಶಿ ಹುಲಿಕುಂಟೆ ಮಠ್, ಪಾಲಿಕೆಯ ಮಾಜಿ ಸದಸ್ಯರು, ಜಿಲ್ಲೆಯ ಎಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಪದಾಧಿಕಾರಿಗಳು, ಮಹಿಳಾ ಘಟಕದ ಮುಖಂಡರು ಪಾಲ್ಗೊಂಡಿದ್ದರು.