ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಜಂತ್‌ಕಲ್ ಮೈನಿಂಗ್ ವಿಚಾರದಲ್ಲಿ ಸಹಿ ಫೋರ್ಜರಿಯಾಗಿದ್ದರೆ ದೂರು ನೀಡಲಿ. ಅದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ತುಮಕೂರಿನಲ್ಲಿ ಭರ್ತಿಯಾಗಿರುವ ಅಮಾನಿಕೆರೆಗೆ ಭಾಗಿನ ಅರ್ಪಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಂತಕಲ್ ಮೈನಿಂಗ್ ಸಂಬಂಧ ಕುಮಾರಸ್ವಾಮಿ ಅವರು ದೂರು ಕೊಟ್ಟರೆ ಪರಿಶೀಲಿಸಿ, ಕ್ರಮ ಕೈಗೊಳ್ಳುತ್ತೇವೆ. ನಮ್ಮ ಸರ್ಕಾರ ದ್ವೇಷದ ರಾಜಕಾರಣ ಮಾಡುವುದಿಲ್ಲ. ಕಾನೂನು ಮೀರಿ ಏನನ್ನು ಮಾಡಿಲ್ಲ. ಪ್ರತಿಪಕ್ಷದವರು ರಾಜ್ಯಪಾಲರ ಕಚೇರಿಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ರಾಜ್ಯಪಾಲರಿಗೆ ಬೆದರಿಕೆ ಇದೆ ಎಂಬುದರ ಕುರಿತು ನನಗಾಗಲಿ ಅಥವಾ ಡಿಜಿಪಿ ಅವರ ಗಮನಕ್ಕಾಗಲಿ ಬಂದಿಲ್ಲ. ರಾಜ್ಯಪಾಲರಿಗೆ ಬುಲೆಟ್ ಪ್ರೂಫ್ ಕಾರು ಕೊಟ್ಟಿರುವ ಬಗ್ಗೆ ಹೆಚ್ಚಿನ ಮಾಹಿತಿ ಗೊತ್ತಿಲ್ಲ. ಕೇಂದ್ರದ ಭದ್ರತಾ ವ್ಯವಸ್ಥೆ ಪ್ರಕಾರ ನೀಡಿರಬಹುದು ಎಂದರು.
ಕಾನೂನಿಗಿಂತ ಯಾರು ದೊಡ್ಡವರಿಲ್ಲ. ಕಾನೂನಿಗೆ ಗೌರವ ಕೊಡುತ್ತಿರುವುದರಿಂದಲೇ ಇನ್ನು ನಾವೆಲ್ಲ ಇದ್ದೇವೆ. ಪ್ರಜಾಪ್ರಭುತ್ವ ಉಳಿಯಬೇಕಾದರೆ ಕಾನೂನಿಗೆ ಗೌರವ ನೀಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಜ್ಯೋತಿ ಗಣೇಶ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಅಪರ ಜಿಲ್ಲಾಧಿಕಾರಿ ಡಾ. ಎನ್.ತಿಪ್ಪೇಸ್ವಾಮಿ, ತಹಶೀಲ್ದಾರ್ ಸಿದ್ದೇಶ್ ಇತರರು ಹಾಜರಿದ್ದರು.