ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನದಲ್ಲಿ ವಿಪಕ್ಷಗಳು ರಾಜ್ಯಪಾಲರ ಕಚೇರಿಯನ್ನು ದುರುಪಯೋಗಪಡಿಸಿಕೊಂಡು ಮುಖ್ಯಮಂತ್ರಿ ಹಾಗೂ ಸರ್ಕಾರದ ಮೇಲೆ ತಿರುಳಿಲ್ಲದ ಆಪಾದನೆಯನ್ನು ಮಾಡಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ರಾಜ್ಯದ ಜನತೆ ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ತಿಳಿಸಿದರು.
ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರ ಕಾನೂನು ಚೌಕಟ್ಟಿನಲ್ಲಿಯೇ ಆಡಳಿತ ನಡೆಸುತ್ತಿದೆ. ಯಾವುದೇ ಟೀಕೆ-ಟಿಪ್ಪಣಿಗಳಿಗೂ ನಾವು ಹೆದರುವುದಿಲ್ಲ. ರಾಜ್ಯದ ಅಭಿವೃದ್ಧಿಯೇ ನಮ್ಮ ಸರ್ಕಾರದ ಮೂಲಮಂತ್ರವೆಂದು ತಿಳಿಸಿದರು.
ಚುನಾವಣೆಗೂ ಮುನ್ನ ರಾಜ್ಯದ ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸುವ ಮೂಲಕ ನಮ್ಮ ಸರ್ಕಾರವು ಪಂಚ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಬಡತನ ನಿರ್ಮೂಲನೆಗಾಗಿ ಪಂಚ ಗ್ಯಾರಂಟಿಗಳ ಮೂಲಕ ಫಲಾನುಭವಿಗಳಿಗೆ ಒಂದೂವರೆ ವರ್ಷದಿಂದ ಸಾವಿರಾರು ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ. ಯಾವುದೇ ಕಾರಣಕ್ಕೂ ನಾವು ಗ್ಯಾರಂಟಿ ಯೋಜನೆಯನ್ನು ಸ್ಥಗಿತ ಮಾಡುವುದಿಲ್ಲವೆಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ನೀರಾವರಿ, ರಸ್ತೆ, ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ, ಶಿಕ್ಷಣ, ಕೈಗಾರಿಕೆ, ಆರೋಗ್ಯ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಜಿಲ್ಲಾಡಳಿತ ಚುರುಕಿನಿಂದ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಕೆಡಿಪಿ ಸಭೆಯಲ್ಲಿ ಸೂಚನೆ ನೀಡಲಾಗಿದೆ. ಸರ್ಕಾರ ನೀಡಿರುವ ಗುರಿಗಳನ್ನು ನಿಗದಿತ ಸಮಯದೊಳಗೆ ಜನರಿಗೆ ತಲುಪುವಂತೆ ಅನುಷ್ಟಾನ ಮಾಡಬೇಕೆಂದು ನಿರ್ದೇಶಿಸಲಾಗಿದೆ. ಸೂಚನೆಗಳನ್ನು ಪಾಲಿಸದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಕಳೆದ ವರ್ಷದಂತೆ ಈ ವರ್ಷವೂ ಜನರು ಶಾಂತಿಯಿಂದ ಗಣೇಶ ಚತುರ್ಥಿಯನ್ನು ಆಚರಣೆ ಮಾಡಲು ಸೂಕ್ತ ವಾತಾವರಣ ಕಲ್ಪಿಸಲಾಗುವುದು. ಗಣೇಶೋತ್ಸವದ ಹೆಸರಿನಲ್ಲಿ ಯಾರೂ ಸಹ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಕಾನೂನು ಭಂಗಕ್ಕೆ ಪ್ರಯತ್ನಿಸುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಗ್ಯಾರಂಟಿ ಯೋಜನೆಗಳಿಗೆ ಯಾವ ನಿಯಮವನ್ನೂ ಹೊಸದಾಗಿ ಸೇರಿಸುವುದಿಲ್ಲವೆಂದು ಸ್ಪಷ್ಟನೆ ನೀಡಿದರು. ಜಿಲ್ಲೆಯ ಪಡಿತರ ಚೀಟಿಗಳ ಪರಿಷ್ಕರಣೆ ನಡೆಸಲಾಗುತ್ತಿದ್ದು, ಈ ಪರಿಷ್ಕರಣೆಯಲ್ಲಿ 4 ಚಕ್ರದ ವಾಹನ ಹೊಂದಿರುವ, ಸರ್ಕಾರಿ ನೌಕರಿ ಹೊಂದಿರುವ, ಆದಾಯ ತೆರಿಗೆ ಪಾವತಿಸುವ, 3 ಹೆಕ್ಟೇರ್‌ಗಿಂತ ಹೆಚ್ಚು ಜಮೀನು ಹೊಂದಿರುವವರಿಗೆ ಅನ್ನಭಾಗ್ಯ ಯೋಜನೆ ಫಲಾನುಭವಿಗಳಾಗಿ ಪರಿಗಣಿಸಬಾರದು. ನಿಯಮಬಾಹಿರವಾಗಿ ಹೊಂದಿರುವ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಪಡಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.