ಕಡಲೆಕಾಯಿ ಮತ್ತು ರಾಗಿ ಬೆಳೆಯ ರಕ್ಷಣೆಗೆಂದು ತಮ್ಮ ಜಮೀನಿಗೆ ತೆರಳುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ಕರಡಿ ದಾಳಿ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ನಡೆದಿದೆ. ತೀವ್ರ ಗಾಯಗೊಂಡಿರುವ ಸಂಜೀವಪ್ಪ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಗೆ ದಾಖಲಿಸಲಾಗಿದೆ.
ಪಾವಗಡ ತಾಲೂಕಿನ ನಿಡಗಲ್ ಹೋಬಳಿಯ ಪೆಮ್ಮನಹಳ್ಳಿಯಲ್ಲಿ ಶುಕ್ರವಾರ ಬೆಳಗ್ಗೆ 6 ಗಂಟೆ ಸುಮಾರಿನಲ್ಲಿ ಸಂಜೀವಪ್ಪ ತಮ್ಮ ಹೊಲಕ್ಕೆ ಹೋಗುತ್ತಿದ್ದರು. ಆಗ ದಿಢೀರನೆ ಬಂದ ಕರಡಿ ಸಂಜೀವಪ್ಪ ಅವರ ಮೇಲೆ ದಾಳಿ ನಡೆಸಿದೆ.
ಕರಡಿ ದಾಳಿಯಿಂದ ಸಂಜೀವಪ್ಪನ ತಲೆ, ಕುತ್ತಿಗೆ, ತಲೆಯ ಹಿಂಭಾಗ, ಕಾಲು, ಬೆನ್ನಿಗೆ ತೀವ್ರ ಗಾಯವಾಗಿರುವ ಹಿನ್ನೆಲೆಯಲ್ಲಿ ಪಾವಗಡ ಮತ್ತು ತುಮಕೂರಿನಲ್ಲಿ ಚಿಕಿತ್ಸೆ ನೀಡಿ ಬೆಂಗಳೂರಿಗೆ ರವಾನಿಸಲಾಗಿದೆ.
ತಿಮ್ಮಪ್ಪನ ಬೆಟ್ಟದಲ್ಲಿ ಇತ್ತೀಚೆಗೆ ನವಿಲು, ಚಿರತೆ ಹಾಗೂ ಕರಡಿಗಳ ಕಾಟ ಹೆಚ್ಚಾಗಿದ್ದು, ಪ್ರತಿದಿನ ಆಹಾರಕ್ಕಾಗಿ ತೋಟ ಮತ್ತು ಹೊಲಗಳಿಗೆ ದಾಳಿ ಇಡುತ್ತವೆ. ಜೊತೆಗೆ ಬೆಳೆಗಳ ಕಾವಲಿಗೆ ಬರುವ ವ್ಯಕ್ತಿಗಳ ಮೇಲೆ ಎರಗಿ ಗಾಯಗೊಳಿಸುತ್ತಿವೆ. ಇದನ್ನು ತಡೆಗಟ್ಟಲು ಕೂಡಲೇ ಅರಣ್ಯ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.