ತುಮಕೂರು: ಮಕ್ಕಳು ತಮ್ಮ ಬಾಲ್ಯವನ್ನು ಆಟ-ಪಾಠ ಶಿಕ್ಷಣದಿಂದ ಕಳೆಯಬೇಕು, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಯಾವುದೇ ರೀತಿಯ ಕೆಲಸಗಳಲ್ಲಿ ತೊಡಗಿಸದೆ ಅವರಿಗೆ ಶಿಕ್ಷಣ ನೀಡುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವತಿಯಿಂದ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನದ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿಯಿಂದ ಗುಬ್ಬಿ ವೀರಣ್ಣ ಕಲಾಕ್ಷೇತ್ರದವರೆಗೂ ಹಮ್ಮಿಕೊಳ್ಳಲಾಗಿದ್ದ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಕ್ಕಳನ್ನು ಕೆಲಸಕ್ಕೆ ತೊಡಗಿಸಿಕೊಳ್ಳುವುದರಿಂದ ಅವರು ದೈಹಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗಿ ಅನಾರೋಗ್ಯಕ್ಕೆ ತುತ್ತಾಗುತ್ತಾರೆ, ಶಿಕ್ಷಣ ಮಕ್ಕಳಿಗೆ ಕೊಟ್ಟ ಸಂವಿಧಾನಬದ್ಧ ಹಕ್ಕಾಗಿರುವುದರಿಂದ ಪ್ರತಿಯೊಬ್ಬರಿಗೂ ಶಿಕ್ಷಣವನ್ನು ದೊರಕಿಸಿ ಕೊಡಬೇಕು, ಮಕ್ಕಳನ್ನು ಕೆಲಸಕ್ಕೆ ತೊಡಗಿಸಿಕೊಳ್ಳುವುದು ಕಾನೂನು ಬಾಹಿರ ಅಪರಾಧವಾಗಿದ್ದು, ಯಾರಾದರೂ ಮಕ್ಕಳನ್ನು ಕೆಲಸದಲ್ಲಿ ತೊಡಗಿಸಿದರೆ ಕಠಿಣ ಶಿಕ್ಷೆಗೆ ಗುರಿಯಾಗಲಿದ್ದಾರೆ ಎಂದು ತಿಳಿಸಿದರು.
ಪೊಲೀಸ್ ವರಿಷ್ಠಾಧಿಕಾರಿ ಅಶೋಕ್, ಮಕ್ಕಳನ್ನು ಅಂಗಡಿ, ಗ್ಯಾರೇಜ್ ಸೇರಿದಂತೆ ಯಾವುದೇ ರೀತಿಯ ಕೆಲಸಗಳಲ್ಲಿ ತೊಡಗಿಸುವುದು ಅಪರಾಧವಾಗಿದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕೆಲಸಗಳಲ್ಲಿ ತೊಡಗಿಸಬಾರದು, ಒಂದು ವೇಳೆ ಇಂಥ ಪ್ರಕರಣಗಳು ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚು ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಈ ಸಂದರ್ಭ ಕಾರ್ಮಿಕ ಅಧಿಕಾರಿ ತೇಜಾವತಿ, ಸಮಾಜ ಕಲ್ಯಾಣ ಜಂಟಿ ನಿರ್ದೇಶಕ ಎಸ್. ಕೃಷ್ಣಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಎಂ.ಎಸ್. ಶ್ರೀಧರ್, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಂಜುನಾಥ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದಿನೇಶ್ ಆರ್.ಎಂ., ಯೋಜನಾ ನಿರ್ದೇಶಕ ರವಿಕುಮಾರ್, ಕಾರ್ಮಿಕ ನಿರೀಕ್ಷಕ ವೆಂಕಟೇಶ್ ಬಾಬು, ನಾಗಭೂಷಣ್ ಸೇರಿದಂತೆ ಶಾಲಾ ಮಕ್ಕಳು ಇದ್ದರು.