ತುಮಕೂರು ಜಿಲ್ಲೆಯ ಕುಡಿಯುವ ನೀರಿನ ಜೀವನಾಡಿಯಾಗಿರುವ ಹೇಮಾವತಿ ನಾಲೆಗೆ ಪ್ರತ್ಯೇಕ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಮೂಲಕ ಮಾಗಡಿಗೆ ನೀರು ಕೊಂಡೊಯ್ಯಲು ಕೈಗೊಂಡಿರುವ ಯೋಜನೆಯನ್ನು ಕೈಬಿಡುವಂತೆ ಆಗ್ರಹಿಸಿ ಗುಬ್ಬಿ ತಾಲೂಕಿನ ಡಿ.ರಾಂಪುರದ ಹೇಮಾವತಿ ಶಾಖಾ ನಾಲೆ ಬಳಿ ನೂರಾರು ರೈತರು, ಮಠಾಧೀಶರು, ರಾಜಕೀಯ ಪಕ್ಷಗಳ ನಾಯಕರು, ಸಂಘಟನೆಗಳ ಕಾರ್ಯಕರ್ತರು ಪಕ್ಷಾತೀತವಾಗಿ ಸಾಂಕೇತಿಕವಾಗಿ ನಾಲೆಗೆ ಮೂರು ಹಿಡಿ ಮಣ್ಣು ಹಾಕುವ ಮೂಲಕ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಸೊಗಡು ಶಿವಣ್ಣ, ಪೈಪ್‌ಲೈನ್ ಮೂಲಕ ಮಾಗಡಿ, ರಾಮನಗರಕ್ಕೆ ನೀರು ತೆಗೆದುಕೊಂಡು ಹೋಗುವುದರಿಂದ ಜಿಲ್ಲೆಯ ಜನರಿಗೆ ತೀವ್ರ ಅನ್ಯಾಯವಾಗುತ್ತದೆ. ಇಲ್ಲಿನ ಜನರಿಗೆ ಕುಡಿಯುವ ನೀರು ಸಿಗದಂತಾಗುತ್ತದೆ. ಯಾವುದೇ ಕಾರಣಕ್ಕೂ ಜಿಲ್ಲೆಯಿಂದ ಹೇಮಾವತಿ ನೀರನ್ನು ತೆಗೆದುಕೊಂಡು ಹೋಗಲು ಬಿಡುವುದಿಲ್ಲ ಎಂದರು.
ತುಮಕೂರು ಗ್ರಾಮಾಂತರ ಶಾಸಕ ಸುರೇಶ್‌ಗೌಡ ಮಾತನಾಡಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಈ ಯೋಜನೆಯನ್ನು ಸ್ಥಗಿತಗೊಳಿಸಿತ್ತು. ಮತ್ತೆ ಈಗ ಕಾಂಗ್ರೆಸ್ ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಗೆ ಗುದ್ದಲಿ ಪೂಜೆ ಮಾಡದೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಜಿ.ಪಂ. ಕೆಡಿಪಿ ಸಭೆಯಲ್ಲಿ ನಾವೆಲ್ಲಾ ಇದನ್ನು ವಿರೋಧಿಸಿದ್ದೆವು. ಆದರೆ ಜಿಲ್ಲೆಯಲ್ಲಿರುವ ಇಬ್ಬರು ಸಚಿವರು ಡಿ.ಕೆ. ಶಿವಕುಮಾರ್ ರವರಿಗೆ ಹೆದರಿ ಸಚಿವ ಸಂಪುಟದಲ್ಲಿ ಈ ಯೋಜನೆ ವಿರೋಧಿಸಿಲ್ಲ ಎಂದು ದೂರಿದರು.
ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ತುಮಕೂರಿನ ಸಚಿವರಾದ ಕೆ.ಎನ್.ರಾಜಣ್ಣ ಹಾಗೂ ಡಾ.ಜಿ.ಪರಮೇಶ್ವರ್ ಈ ಕೂಡಲೇ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಪರಮೇಶ್ವರ್ ಮನೆ ಮುಂದೆ ಪ್ರತಿಭಟನೆ ನಡೆಸಲಾಗುವುದು. ಜನ ತೀರ್ಮಾನಿಸಿದರೆ ಸರ್ಕಾರ ಬರುತ್ತದೆ, ಹೋಗುತ್ತದೆ. ಆದ್ದರಿಂದ ಸರ್ಕಾರ ಜನರಿಗೆ ಅನ್ಯಾಯ ಮಾಡಿದರೆ ಉಳಿವು ಸಾಧ್ಯವಿಲ್ಲ. ಈ ಯೋಜನೆಯ ಕಾಮಗಾರಿ ಕೈಗೊಳ್ಳಲು ಸರ್ಕಾರದ ಆದೇಶ ಇಲ್ಲ. ಯಾವುದೇ ರೀತಿಯ ಭೂಸ್ವಾಧೀನ ಪ್ರಕ್ರಿಯೆ ನಡೆದಿಲ್ಲ. ಆದರೂ ಕಾಮಗಾರಿ ಕೈಗೆತ್ತಿಕೊಂಡಿದ್ದಾರೆ.ತುಮಕೂರು ಜಿಲ್ಲೆಯ ರೈತರು, ಜನರ ಹಿತ ಕಾಪಾಡುವುದು ನಮ್ಮ ಉದ್ದೇಶ. ಇದರಲ್ಲಿ ಯಾವುದೇ ರಾಜಕಾರಣ ಮಾಡುವುದಿಲ್ಲ, ನಮಗೆ ಅದು ಅಗತ್ಯವೂ ಇಲ್ಲ ಎಂದರು.
ಪ್ರತಿಭಟನೆಯಲ್ಲಿ ಶಾಸಕ ಜ್ಯೋತಿಗಣೇಶ್, ಮಾಜಿ ಶಾಸಕರಾದ ಮಸಾಲೆ ಜಯರಾಮ್, ಹೆಚ್.ನಿಂಗಪ್ಪ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಆಂಜಿನಪ್ಪ, ಬೆಟ್ಟದಹಳ್ಳಿಯ ಚಂದ್ರಶೇಖರ ಸ್ವಾಮೀಜಿ, ಗೋಡೆಕೆರೆ ಮಠದ ಮೃತ್ಯುಂಜಯ ದೇಶಿಕೇಂದ್ರ ಸ್ವಾಮೀಜಿ, ತಮ್ಮಡಿಹಳ್ಳಿ ಮಠದ ಸ್ವಾಮೀಜಿ, ಸರಪಳಿ ಮಠದ ಜ್ಞಾನಾನಂದಪುರಿ ಸ್ವಾಮೀಜಿ, ನೀಲಕಂಠಾಚಾರ್ಯ ಸ್ವಾಮೀಜಿ, ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ವಿದ್ಯಾಶಂಕರ ದೇಶೀಕೇಂದ್ರ ಸ್ವಾಮೀಜಿ, ವಿವಿಧ ಪಕ್ಷಗಳ ಮುಖಂಡರಾದ ಬಿ.ಎಸ್.ನಾಗರಾಜು, ದಿಲೀಪ್‌ಕುಮಾರ್, ಲೋಕೇಶ್ವರ್, ಡಾ.ಪರಮೇಶ್, ಕುಮಾರಸ್ವಾಮಿ, ಮೊದಲಾದವರು ಹಾಜರಿದ್ದರು.