ಹಿರಿಯ ಸಾಹಿತಿ, ಸಾಮಾಜಿಕ ಹೋರಾಟಗಾರ ಕೋಟಿಗಾನಹಳ್ಳಿ ರಾಮಯ್ಯನವರ ಮೇಲೆ ಪಾಪರಾಜನಹಳ್ಳಿಯ ಗ್ರಾಮ ಪಂಚಾಯಿತಿ ಸದಸ್ಯ ಮಂಜುನಾಥ, ಬೈರಪ್ಪ , ತೇರಹಳ್ಳಿಯ ಮುನಿಯಪ್ಪ ಮುಂತಾದವರು ತೀವ್ರವಾಗಿ ಹಲ್ಲೆ ಮಾಡಿದ್ದಾರೆ.
ಮೈಕ್ ಸೌಂಡ್ ಹೆಚ್ಚಾಗಿ ಇಡಬೇಡಿ ಎಂದಿದ್ದಕ್ಕೆ ಪುಡಾರಿಗಳು ರಾಮಯ್ಯ ಅವರ ಕಣ್ಣಿನಲ್ಲಿ ರಕ್ತ ಬರುವಂತೆ ಹಲ್ಲೆ ಮಾಡಲಾಗಿದೆ. ರಾಮಯ್ಯ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವ್ಯಾಪಕ ಖಂಡನೆ – ಕ್ರಮಕ್ಕೆ ಒತ್ತಾಯ
ರಾಮಯ್ಯನವರ ಮೇಲಿನ ದಾಳಿ ಅತ್ಯಂತ ಖಂಡನೀಯ. ಪೊಲೀಸರು ತಕ್ಷಣವೇ ಹಲ್ಲೆಕೋರರನ್ನು ಬಂಧಿಸಬೇಕು ಮತ್ತು ರಾಮಯ್ಯನವರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಸಾಹಿತಿ ಡಾ.ವಡ್ಡಗೆರೆ ನಾಗರಾಜಯ್ಯ ಒತ್ತಾಯಿಸಿದ್ದಾರೆ.
ರಾಮಯ್ಯ ಮೇಲಿನ ಹಲ್ಲೆ ವಿಷಯ ತಿಳಿದು ಮನಸ್ಸಿಗೆ ಆಘಾತವಾಯಿತು. ಕ್ಷುಲ್ಲಕ ಕಾರಣಕ್ಕೆ ಪುಡಿರೌಡಿಯಂತಿರುವ ಗ್ರಾ.ಪಂ ಸದಸ್ಯನೊಬ್ಬ ಕರ್ನಾಟಕದ ಸಾಂಸ್ಕೃತಿಕ ಆಸ್ತಿಯಂತಿರುವ ಕೋಟಗಾನಹಳ್ಳಿ ರಾಮಯ್ಯನವರ ಮೇಲೆ ಹಲ್ಲೆ ಮಾಡಿರುವುದು ಮನುಷ್ಯತ್ವವಿರುವವರು ಸಹಿಸಿಕೊಳ್ಳಲಾಗದಿರುವ ವಿಷಯ.
ಓರ್ವ ಗ್ರಾಮ ಪಂಚಾಯ್ತಿ ಸದಸ್ಯನಿಗೆ ಈ ಮಟ್ಟದ ಧೈರ್ಯ ಎಲ್ಲಿಂದ ಬರುತ್ತೆ? ಈವಯ್ಯ ಒಬ್ಬಂಟಿ ಈತನಿಗೆ ಹೊಡೆದರೆ ಕೇಳ್ಕೊಂಡು ಯಾರು ಬರುತ್ತಾರೆ ಎನ್ನೋ ಭ್ರಮೆ ಈ ರೀತಿಯ ಹುಂಬ ವರ್ತನೆಗೆ ದಾರಿ ಮಾಡಿಕೊಟ್ಟಿರುತ್ತದೆ. ಇಂತಹ ಸಂದರ್ಭದಲ್ಲಿ ಪೋಲೀಸರು ಏನೋ ಮಾಡಬೇಕೆಂದು, ಸರ್ಕಾರ ಎದ್ದು ಬರಬೇಕೆಂದು ಬಯಸುವುದಕ್ಕಿಂತ, ರಾಮಯ್ಯನವರ ಹಿತ ಬಯಸುವವರೆಲ್ಲ ಜೊತೆಗೆ ನಿಂತು ಅವರ ಬಳಗ ಎಂತದ್ದು ಎನ್ನೋದನ್ನು ತೋರಿಸಬೇಕು ಎಂದು ಕೃಷ್ಣಮೂರ್ತಿ ಕೈದಾಳ ಎಂಬುವರು ಹೇಳಿದ್ದಾರೆ.