Friday, November 22, 2024
Google search engine
Homeಮುಖಪುಟತುಮಕೂರಿನಲ್ಲಿ ಕೇಜ್ರಿವಾಲ್ ಬಂಧನ ಖಂಡಿಸಿ ಎಎಪಿ ಪ್ರತಿಭಟನೆ

ತುಮಕೂರಿನಲ್ಲಿ ಕೇಜ್ರಿವಾಲ್ ಬಂಧನ ಖಂಡಿಸಿ ಎಎಪಿ ಪ್ರತಿಭಟನೆ

ಅಬಕಾರಿ ನೀತಿಗಳ ಉಲ್ಲಂಘನೆ ಅಡಿಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಅಕ್ರಮವಾಗಿ ಬಂಧಿಸಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ದಮನಕಾರಿ ನೀತಿಯನ್ನು ವಿರೋಧಿಸಿ ಭಾನುವಾರ ಅಮ್ ಆದ್ಮಿ ಪಾರ್ಟಿ ವತಿಯಿಂದ ತುಮಕೂರಿನ ಟೌನ್‌ಹಾಲ್ ವೃತ್ತದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅಮ್ ಆದ್ಮಿ ಪಾರ್ಟಿಯ ರಾಜ್ಯ ಉಪಾಧ್ಯಕ್ಷ ಡಾ.ವಿಶ್ವನಾಥ್,ಇಂಡಿಯಾ ಟುಡೇ ಸರ್ವೆ ಪ್ರಕಾರ ಇಡೀ ದೇಶದಲ್ಲಿಯೇ ನಂಬರ್ ಒನ್ ಮುಖ್ಯಮಂತ್ರಿ ಎನಿಸಿಕೊಂಡ ಅಮ್ ಆದ್ಮಿ ಪಕ್ಷದ ಸಂಸ್ಥಾಪಕ ಅರವಿಂದ ಕೇಜ್ರಿವಾಲ್ ಅವರನ್ನು ಬಂಧಿಸುವ ಮೂಲಕ ವಿರೋಧ ಪಕ್ಷಗಳ ಆತ್ಮಸ್ಧೈರ್ಯ ಕುಗ್ಗಿಸುವ ಪ್ರಯತ್ನವನ್ನು ಕೇಂದ್ರದ ನರೇಂದ್ರಮೋದಿ ಸರ್ಕಾರ ಮಾಡಿದೆ. ಸುಳ್ಳು ಹಗರಣದ ಹೆಸರಿನಲ್ಲಿ ಕೇಜ್ರಿವಾಲ್ ಅವರನ್ನು ಬಂಧಿಸಿ, ಅವರಿಗೆ ಬೇಲ್ ಸಿಗದಂತೆ ಮಾಡಿರುವ ಕೇಂದ್ರದ ಸರ್ವಾಧಿಕಾರಿ ಧೋರಣೆಯ ವಿರುದ್ದ ಇಂದು ಉಪವಾಸ ಸತ್ಯಾಗ್ರಹ ನಡೆಸುತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಉಗ್ರ ಸ್ವರೂಪದ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ತಿಳಿಸಿದರು.

ಎಎಪಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾತನಾಡಿ, ಬಿಜೆಪಿ ಪಕ್ಷ ಅಭಿವೃದ್ದಿ ವಿಚಾರವನ್ನು ಬಿಟ್ಟು ಜನರನ್ನು ಮೌಢ್ಯದ ಕಡೆಗೆ ತೆಗೆದುಕೊಂಡು ಹೋಗುತ್ತಿದೆ. ಭ್ರಷ್ಟಾಚಾರಿಗಳಿಗೆ ಕ್ಲೀನ್‌ಚಿಟ್ ನೀಡುವ ಪಕ್ಷ ಎಂದರೆ ಅದು ಬಿಜೆಪಿ. ಹಣಕಾಸಿನ ಕಳಂಕ ಹೊತ್ತ ಸುಮಾರು 25ಕ್ಕೂ ಹೆಚ್ಚು ಜನರು ಬಿಜೆಪಿಗೆ ಸೇರಿದ ನಂತರ ಅವರ ಮೇಲಿದ್ದ ಇಡಿ, ಸಿಪಿಐ, ಐಟಿ ಕೇಸುಗಳನ್ನು ಖುಲಾಸೆ ಮಾಡಲಾಗಿದೆ.

ರಾಮಮಂದಿರ, ಹಿಂದು-ಮುಸ್ಲಿಂ ಹೆಸರಿನಲ್ಲಿ ಜನರನ್ನು ಒಡೆದು ಆಳುವ ನೀತಿ ಅನುಸರಿಸುತ್ತಿದ್ದು, ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿದ ದೆಹಲಿ ಸರಕಾರದ ಸಿ.ಎಂ.ವಿರುದ್ದ ದಾಖಲೆ ಇಲ್ಲದ ಸುಳ್ಳು ಅವ್ಯವಹಾರ ಕೇಸಿನಲ್ಲಿ ಬಂಧಿಸಿರುವುದು ಖಂಡನೀಯ. ಈ ಕೂಡಲೆ ಕೇಜ್ರಿವಾಲ್ ಅವರನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.

ಎಎಪಿ ಜಿಲ್ಲಾಧ್ಯಕ್ಷ ಜಯರಾಮಯ್ಯ ಮಾತನಾಡಿ, ಇಂದು ಇಡೀ ದೇಶದಾದ್ಯಂತ ಅರವಿಂದ ಕೇಜ್ರಿವಾಲ್ ಅವರ ಬಂಧನವನ್ನು ವಿರೋಧಿಸಿ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತಿದೆ. ಕೇಜ್ರಿವಾಲ್ ಅವರ ಬಂಧನ ಸಂವಿಧಾನ ವಿರೋಧಿ ಮತ್ತು ಪ್ರಜಾಪ್ರಭುತ್ವ ವಿರೋಧಿಯಾಗಿದೆ.ದೇಶದಲ್ಲಿ ಆರಾಜಕತೆ ಸೃಷ್ಟಿಯಾಗಿದೆ. ಆರ್.ಎಸ್.ಎಸ್. ಅಜೆಂಡದಂತೆ ಆಡಳಿತ ನಡೆಸುತ್ತಿರುವ ಬಿಜೆಪಿ, ಆರ್.ಎಸ್.ಎಸ್. ಚಿಂತನೆ ದೇಶವನ್ನು ವಿಭಜಿಸುವುದಾಗಿದೆ. ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತಿದ್ದ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಶಕ್ತಿ ಮೀರಿ ಪ್ರಯತ್ನಿಸುತಿದ್ದು, ಇದರ ಫಲವಾಗಿ ಸಾಕ್ಷಾಧಾರಗಳಿಲ್ಲದಿದ್ದರೂ ಬಂಧಿಸಿ, ತೊಂದರೆ ಕೊಡುತ್ತಿದೆ. ಇದರ ವಿರುದ್ದ ನಾವೆಲ್ಲರೂ ಒಗ್ಗೂಡಬೇಕಿದೆ ಎಂದರು.

ಉಪವಾಸ ಸತ್ಯಾಗ್ರಹದಲ್ಲಿ ರಾಜ್ಯ ಜಂಟಿ ಕಾರ್ಯದರ್ಶಿ ಪ್ರೇಮಕುಮಾರ್, ಮಹಿಳಾ ಅಧ್ಯಕ್ಷೆ ರುಕ್ಸಾನಾ ಭಾನು, ನಗರ ಅಧ್ಯಕ್ಷ ಗೌಸ್ ಫೀರ್, ಗ್ರಾಮಾಂತರ ಅಧ್ಯಕ್ಷ ದಿನೇಶಕುಮಾರ್, ಮಧುಗಿರಿ ಅಧ್ಯಕ್ಷ ಮುಜಾಮಿಲ್ ಪಾಷ, ಶಿರಾ ಪ್ರಶಾಂತ ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular