ರಾಜ್ಯದಲ್ಲಿ ಲೋಕಸಭಾ ಚುನಾವಣೆ ತ್ರಿಕೋನ ಸ್ಪರ್ಧೆ ನಡೆದರೆ ಜೆಡಿಎಸ್ ಮೂರು ಸ್ಥಾನಗಳಲ್ಲಿ ಜಯ ಗಳಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನ ಜೆ.ಪಿ.ಭವನದಲ್ಲಿ ನಡೆದ ಕೋರ್ ಕಮಿಟಿ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಾಸನ, ಮಂಡ್ಯ ಮತ್ತು ಕೋಲಾರ ಕ್ಷೇತ್ರಗಳನ್ನು ಕೇಳಿದ್ದೇವೆ. ನಮಗೆ ಮೂರು ಸೀಟುಗಳನ್ನು ಬಿಟ್ಟುಕೊಡುತ್ತಾರೆಂಬ ವಿಶ್ವಾಸವಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ನಾವು ಆರು-ಏಳು ಸೀಟುಗಳನ್ನು ಕೇಳುತ್ತಿಲ್ಲ. ನಾವು ಕೇಳುತ್ತಿರುವುದು ಕೇವಲ 3-4 ಸೀಟುಗಳನ್ನು ಮಾತ್ರ. ಸೀಟು ಹಂಚಿಕೆ ಇನ್ನೂ ಅಂತಿಮವಾಗಿಲ್ಲ. ಸೀಟು ಹಂಚಿಕೆ ಆದ ನಂತರ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವನ್ನು ನಮಗೆ ಬಿಟ್ಟುಕೊಡುವಂತೆ ಕೇಳುತ್ತಿಲ್ಲ. ಈಗ ಸುದ್ದಿಯಲ್ಲಿರುವುದು ಕೇವಲ ಊಹಾಪೋಹ. ಖಾಲಿ ಇರುವ ಕ್ಷೇತ್ರಕ್ಕೆಲ್ಲಾ ನನ್ನ ಹೆಸರು ಕೇಳಿಬರುತ್ತಿದೆ. ಮಂಡ್ಯದಲ್ಲಿ ಯಾರು ಸ್ಪರ್ಧಿಸಬೇಕೆಂಬುದು ಟಿಕೆಟ್ ಅಂತಿಮವಾದ ಬಳಿಕ ನಿರ್ಧರಿಸುತ್ತೇವೆ ಎಂದರು.
ಸೀಟು ಹಂಚಿಕೆ ಅಧಿಕೃತ ಘೋಷಣೆಯಾಗುವವರೆಗೂ ನಾನು ಮಾತನಾಡುವುದಿಲ್ಲ. ನಾವು 3-4 ಸೀಟು ಕೇಳುತ್ತಿದ್ದೇವೆ. ಅಷ್ಟು ಸೀಟುಗಳು ಸಿಗುವ ಸಾಧ್ಯತೆ ಇದೆ. ಹಾಸನ, ಮಂಡ್ಯದಲ್ಲೂ ನಮ್ಮ ಅಭ್ಯರ್ಥಿಗಳು ಗೆಲ್ಲುತ್ತಾರೆ. ತ್ರಿಕೋನ ಸ್ಪರ್ಧೆ ನಡೆದರೆ ಸುಲಭವಾಗಿ ಗೆಲುತ್ತೇವೆ ಎಂದು ಮಾರ್ಮಿಕವಾಗಿ ನುಡಿದರು.
ಕರ್ನಾಟಕ ರಾಜಕೀಯವೇ ಬೇರೆ, ದೇಶದ ರಾಜಕೀಯವೇ ವೇರೆ ಎಂದು ತಿಳಿಸಿದರು.


