ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ಬಿಜೆಪಿಯನ್ನು ತೊರೆದು ಇಂದು ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಜಯಪ್ರಕಾಶ್ ಹೆಗ್ಡೆ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಇದೇ ಸಂದರ್ಭದಲ್ಲಿ ಮಾಜಿ ಶಾಸಕ ಸುಕುಮಾರ ಶೆಟ್ಟಿ, ಕುಮಾರಸ್ವಾಮಿ ಅವರು ಸಹ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಜಯಪ್ರಕಾಶ್ ಹೆಗ್ಡೆ, ಸುಕುಮಾರಶೆಟ್ಟಿ ಮತ್ತು ಕುಮಾರಸ್ವಾಮಿ ಅವರು ಕಾಂಗ್ರೆಸ್ ಗೆ ಸೇರ್ಪಡೆಯಾಗಿರುವುದು ಪಕ್ಷಕ್ಕೆ ಬಲಬಂದಂತೆ ಆಗಿದೆ ಎಂದು ಹೇಳಿದರು.
ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಪರಮೇಶ್ವರ್, ಬಾಬಾ ಸಾಹೇಬ್ ಅಂಬೇಡ್ಕರ್ ಬರೆದಿರುವ ಸಂವಿಧಾನದಿಂದಲೇ ನಾನು ಪ್ರಧಾನಿ ಹುದ್ದೆಗೇರಲು ಸಾಧ್ಯವಾಯಿತು ಎಂದು ಹೇಳುವ ಪ್ರಧಾನಿ ನರೇಂದ್ರ ಮೋದಿ ಅದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
ಬಿಜೆಪಿಯವರು ದೇಶವನ್ನು ಒಡೆಯುವ ಕೆಲಸದಲ್ಲಿ ತೊಡಗಿದ್ದಾರೆ. ಇದರ ನಡುವೆಯೇ ದೇಶದಲ್ಲಿ ವಾತಾವರಣ ಬದಲಾವಣೆಯಾಗಿದೆ. ಹೆಚ್ಚಿನ ಸೀಟುಗಳನ್ನು ಕಾಂಗ್ರೆಸ್ ಪಡೆಯಲಿದೆ ಎಂಬುದನ್ನು ಜನಸಮುದಾಯ ಮಾತನಾಡಿಕೊಳ್ಳುತ್ತಿದೆ ಎಂದು ಹೇಳಿದರು.
ನಿತ್ಯವೂ ಸರ್ವೆಗಳು ಬರುತ್ತಿವೆ. ಕಾಂಗ್ರೆಸ್ ಗೆ ಕೇವಲ 3 ಸೀಟು ಬರುತ್ತದೆ ಎಂದು ಹೇಳುತ್ತಿವೆ. ನಾನು ಸವಾಲು ಹಾಕಿ ಹೇಳುತ್ತೇನೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಲೋಕಸಭೆ ಚುನಾವಣೆಯಲ್ಲಿ 20 ಸೀಟುಗಳನ್ನು ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.