ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುದ್ದಹನುಮೇಗೌಡ ಅವರು ಯಾವುದೇ ಷರತ್ತುಗಳನ್ನು ಹಾಕದೆ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ. ಆದರೂ ಟಿಕೆಟ್ ಸಿಗಲಿದೆ ಎಂದು ಹೇಳಿದ್ದಾರೆ.
ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ಯಾರು ಬೇಕಾದರೂ ಕೇಳಬಹುದು. ಟಿಕೆಟ್ ಬಗ್ಗೆ ಅಂತಿಮವಾಗಿ ಹೈಕಮಾಂಡ್ ತೀರ್ಮಾನಿಸಲಿದೆ ಎಂದು ತಿಳಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚರ್ಚೆಸಿ ಟಿಕೆಟ್ ಅಂತಿಮಗೊಳಿಸುತ್ತಾರೆ ಎಂದರು.
ಮುದ್ದಹನುಮೇಗೌಡ ಅವರಿಗೆ ಟಿಕೆಟ್ ನೀಡಿದರೆ ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಹೇಳುತ್ತಿದ್ದರು ಕೆ.ಎನ್.. ಆದರೆ ಈಗ ಅವರಿಗೆ ಟಿಕೆಟ್ ಸಿಗಬಹುದು ಎಂದು ಉಲ್ಟಾ ಹೊಡೆದಿದ್ದಾರೆ. ಮುದ್ದಹನುಮೇಗೌಡರು ಯಾವುದೇ ಷರತ್ತು ವಿಧಿಸದೆ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ಹೇಳಿದ್ದಾರೆ.
ಯಾರ್ರೀ ಅವನು ಮುರುಳೀಧರ ಹಾಲಪ್ಪ?
ಮುರುಳೀಧರ ಹಾಲಪ್ಪ ಬಗ್ಗೆ ಕೇಳುತ್ತಿದ್ದಂತೆಯೇ ಸಿಡಿಮಿಡಿಗೊಂಡ ಕೆ.ಎನ್.ರಾಜಣ್ಣ, ಯಾರ್ರೀ ಮುರುಳೀಧರ ಹಾಲಪ್ಪ? ಟಿವಿನೋರು ಎತ್ತಿ ಕುಂಡರಿಸಿದ್ದೀರಿ. ಎಷ್ಟು ಓಟ್ ಹಾಕ್ಸಿದಾನೇ ರೀ? ನನ್ನ ಕ್ಷೇತ್ರದಲ್ಲಿ ಐದು ಚುನಾವಣೆ ನಡೆಸಿದ್ದೇನೆ. ಒಂದು ಚುನಾವಣೆಯಲ್ಲಿ ಒಂದು ಓಟ್ ಹಾಕ್ಸಿದ್ದಾನೆಯೇ? ಎಂದು ಸಿಡಿಮಿಡಿ ವ್ಯಕ್ತಪಡಿಸಿದರು.