Friday, October 18, 2024
Google search engine
Homeಚಳುವಳಿಬಗರ್ ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸುವ ಕ್ರಮ ವಿರೋಧಿಸಿ ಪ್ರತಿಭಟನೆ

ಬಗರ್ ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸುವ ಕ್ರಮ ವಿರೋಧಿಸಿ ಪ್ರತಿಭಟನೆ

ತಿಪಟೂರು ತಾಲೂಕಿನ ಹೊನ್ನವಳ್ಳಿ ಹೋಬಳಿಯ ಹಾಲ್ಕುರಿಕೆ ಗ್ರಾಮದ ಅವೃತ್ ಮಹಲ್ ಕಾವಲಿನ ಹಿಡುವಳಿದಾರರನ್ನು ಮತ್ತು ಬಗರ್ ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸುವ ಅರಣ್ಯ ಇಲಾಖೆಯ ಆಕ್ರಮಣವನ್ನು ವಿರೋಧಿಸಿ ಅಖಿಲ ಭಾರತ ರೈತ, ಕೃಷಿ ಕಾರ್ಮಿಕರ ಸಂಘಟನೆ ನೇತೃತ್ವದಲ್ಲಿ ತುಮಕೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ತುಮಕೂರಿನ ಟೌನ್ ಹಾಲ್ ನಿಂದ ನೂರಾರು ರೈತರು ಅರಣ್ಯ ಇಲಾಖೆಯ ಒಕ್ಕಲೆಬ್ಬಿಸುವ ನೀತಿ ಮತ್ತು ಬಗರ್ ಹುಕುಂ ಸಾಗುವಳಿ ದಾರರಿಗೆ ಶೀಘ್ರ ಹಕ್ಕುಪತ್ರ ನೀಡದಿರುವುದನ್ನು ವಿರೋಧಿಸಿ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಅರಣ್ಯ ಇಲಾಖೆಯು ಕ್ರಯಕ್ಕೆ ಜಮೀನು ತೆಗೆದುಕೊಂಡಿರುವವರಿಗೂ, ಖಾತೆದಾರರಿಗೂ ನೋಟಿಸು ಕೊಡುವುದು ಮತ್ತು ತೆರವುಗೊಳಿಸುವಂತೆ ಒತ್ತಾಯಿಸುತ್ತಿರುವುದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎಐಕೆಕೆಎಂಎಸ್ ಜಿಲ್ಲಾ ಅಧ್ಯಕ್ಷ ಎಸ್.ಎನ್.ಸ್ವಾಮಿ, ಕೇಂದ್ರದ ಬಿಜೆಪಿ ಸರ್ಕಾರ ಮತ್ತು ರಾಜ್ಯ ಕಾಂಗ್ರೆಸ್ ಸರ್ಕಾರ ರೈತರಿಂದ ಜಮೀನು ಕಸಿದುಕೊಳ್ಳಲು ಮುಂದಾಗಿವೆ. ಸರ್ಕಾರಿ ಜಮೀನುಗಳನ್ನು ಕಾರ್ಪೊರೆಟ್ ಕಂಪೆನಿಗಳಿಗೆ ಮತ್ತು ತಮ್ಮದೇ ಸಂಸ್ಥೆಗಳಿಗೆ ಪರಭಾರೆ ಮಾಡಲು ರೈತರ ಜಮೀನುಗಳನ್ನು ವಿವಿಧ ನೆಪಗಳನ್ನೊಡ್ಡಿ ಕಸಿದುಕೊಳ್ಳುತ್ತಿವೆ ಎಂದು ಆರೋಪಿಸಿದರು.

ರೈತರ ಭೂಮಿಯನ್ನು ಸುಲಭವಾಗಿ ವರ್ಗಾವಣೆ ಮಾಡಲೆಂದೇ ಭೂ ಸುಧಾರಣಾ ಮಸೂದೆಗೆ ತಿದ್ದುಪಡಿ ತರಲಾಗಿದೆ. ರೈತರ ಜಮೀನನ್ನು ವಿವಿಧ ಯೋಜನೆಗಳಿಗಾಗಿ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಬರ, ಬೆಳೆಹಾನಿ, ಬೆಲೆ ಕುಸಿತಗಳಿಂದ ಕಂಗಾಲಾಗಿರುವ ರೈತರನ್ನು ಮೇಲಕ್ಕೆತ್ತುವ ಬದಲು ಅವರನ್ನು ನಿರ್ಗತಿಕರನ್ನಾಗಿ ಮಾಡುತ್ತಿದೆ. ಸರ್ಕಾರವೇ ಮಂಜೂರು ಮಾಡಿರುವ ಜಮೀನುಗಳನ್ನು ರಾಜರ ಕಾಲದ ದಾಖಲೆಗಳನ್ನು ತೋರಿಸುತ್ತಾ ಬದುಕು ಕಟ್ಟಿಕೊಂಡಿರುವ ರೈತರನ್ನು ಅರಣ್ಯ ಇಲಾಖೆಯು ಬೀದಿಗೆ ತಳ್ಳುತ್ತಿದೆ. ರೈತರು ಕಂದಾಯ ಇಲಾಖೆಯ ದಾಖಲೆಗಳನ್ನಿಟ್ಟುಕೊಂಡು ಬದುಕು ಕಳೆದುಕೊಳ್ಳಬೇಕಾಗಿದೆ ಎಂದರು.

ಜಿಲ್ಲಾ ಕಾರ್ಯದರ್ಶಿ ಲೋಕೇಶ್ ಭೈರನಾಯಕನಹಳ್ಳಿ ಮಾತನಾಡಿ, ಜಮೀನಿಲ್ಲದ ರೈತರು ಬದುಕು ಸಾಗಿಸಲೆಂದು ಹತ್ತಾರು ವರ್ಷಗಳಿಂದ ಪಾಳು ಬಿದ್ದಿದ್ದ ಜಮೀನುಗಳಲ್ಲಿ ವ್ಯವಸಾಯ ಮಾಡುತ್ತಿರುವ ಬಗರ್ ಹುಕುಂ ಸಾಗುವಳಿದಾರರ ಬದುಕು ಮೂರಾಬಟ್ಟೆಯಾಗುವ ಪರಿಸ್ಥಿತಿಯಿದೆ. ಹಲವು ವರ್ಷಗಳಿಂದ ವ್ಯವಸಾಯವ ಮಾಡುತ್ತಿರುವವರಿಗೂ ಇದುವರೆಗೂ ಮಂಜೂರಾತಿ ಪತ್ರ ದೊರಕಿಲ್ಲ. ಮಂಜೂರಾತಿ ಸಿಕ್ಕವರಿಗೆ ಖಾತೆಯಾಗಿಲ್ಲ, ಪೋಡ್ ಆಗಿಲ್ಲ. ಹಕ್ಕುಪತ್ರಗಳಿಗಾಗಿ ವರ್ಷಾನುಗಟ್ಟಲೆ ಸರ್ಕಾರಿ ಕಚೇರಿಗಳನ್ನು ಅಲೆದ ರೈತರ ಚಪ್ಪಲಿ ಸವೆಯಿತೇ ಹೊರತು ಬೇರೇನೂ ಆಗಲಿಲ್ಲ ಎಂದು ದೂರಿದರು.

ಇಷ್ಟು ವರ್ಷಗಳ ಕಾಲ ವಂಶಪಾರಂಪರ್ಯವಾಗಿ ಹೇಗೋ ಕೃಷಿ ಮಾಡಿಕೊಂಡು ಬಂದಿದ್ದ ರೈತರಿಗೆ ತಮ್ಮ ಜಮೀನುಗಳನ್ನೇ ಕಳೆದುಕೊಳ್ಳುವ ಪರಿಸ್ಥಿತಿ ಬಂದಿದೆ. ಸರ್ಕಾರಗಳ ಆದೇಶಗಳು, ಸಚಿವರ ಪತ್ರಿಕಾ ಹೇಳಿಕೆಗಳು, ಅರಣ್ಯ ಇಲಾಖೆಯ ಅಧಿಕಾರಿಗಳ ದಾಳಿ, ನೋಟಿಸು ಮತ್ತು ಅವರ ನ್ಯಾಯಾಲಯಗಳ ಆದೇಶಗಳಿಂದ ರೈತರು ಕಂಗಾಲಾಗಿದ್ದಾರೆ ಎಂದು ಟೀಕಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಪ್ರಸನ್ನ ಕುಮಾರ್, ಎನ್.ನವೀನ್, ಪ್ರಶಾಂತ್ ಹಾಲ್ಕುರಿಕೆ, ಚಂದ್ರಶೇಖರ್ ಹಾಲೇನಹಳ್ಳಿ, ಮಲ್ಲಿಕಾರ್ಜುನ, ಹರೀಶ್, ರುದ್ರಣ್ಣ, ಭಾಗ್ಯಮ್ಮ, ಚಿಕ್ಕನಾಯಕನಹಳ್ಳಿಯ ಮಂಜುನಾಥ್, ಧರಣೀಶ್ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular